ನವದೆಹಲಿ: ಜಾರಿ ನಿರ್ದೇಶನಾಲಯದ ನಿರ್ದೇಶಕರ (Enforcement Directorate) ಅಧಿಕಾರಾವಧಿ ವಿಸ್ತರಣೆ ಅಕ್ರಮ ಎಂದಿದ್ದ ಸುಪ್ರೀಂ ಕೋರ್ಟ್(Supreme Court), ಸೆಪ್ಟೆಂಬರ್ 15ವರೆಗೂ ಸಂಜಯ್ ಕುಮಾರ್ ಮಿಶ್ರಾ (Sanjay Kumar Mishra) ಅವರು ಇಡಿ ನಿರ್ದೇಶಕರಾಗಿ ಮುಂದುವರಿಯಲು ಅನುಮತಿ ನೀಡಿದೆ. ‘ರಾಷ್ಟ್ರೀಯ ಹಿತಾಸಕ್ತಿ’ಯ ಹಿನ್ನೆಲೆಯಲ್ಲಿ ಅವರು ಮಿಶ್ರಾ ಅವರ ಅಧಿಕಾರಾವಧಿಯನ್ನು ಮುಂದುವರಿಸುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರವು ಅಕ್ಟೋಬರ್ 15ರವರೆಗೂ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಇ.ಡಿ ನಿರ್ದೇಶಕರಾಗಿ ಮುಂದುವರಿಯಲು ಅವಕಾಶ ನೀಡಬೇಕೆಂದು ಬುಧವಾರ ಮನವಿ ಸಲ್ಲಿಸಿತ್ತು. ಈ ಎಫ್ಎಟಿಎಫ್ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಅವರ ಅನುಪಸ್ಥಿತಿಯು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತನ್ನ ಮನವಿಯಲ್ಲಿ ತಿಳಿಸಿತ್ತು.
ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ತಯಾರಿಕೆಯು ನಿರ್ಣಾಯಕ ಹಂತದಲ್ಲಿದೆ. ಹಾಗಾಗಿ, ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅವರ ಅನುಪಸ್ಥಿತಿಯು ವ್ಯತಿರಿಕ್ತ ಪರಿಣಾಮ ಬೀರಲಿದೆ. 63 ವರ್ಷದ ಮಿಶ್ರಾ ಅವರು 2020ರ ಆರಂಭದಿಂದಲೂ ಅಗತ್ಯ ಇರುವ ದಾಖಲೆಗಳು ತಯಾರಿಕೆ ಹಾಗೂ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಕ್ರಮ ಹಣವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣ ಸಂದಾಯವನ್ನು ತಡೆಯುವುದು ಎಫ್ಎಟಿಎಫ್ ಉದ್ದೇಶವಾಗಿದ್ದು, ಇದೊಂದು ಜಾಗತಿಕ ಸಂಸ್ಥೆಯಾಗಿದೆ ಎಂದು ಮನವಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಜಸ್ಟೀಸ್ ಬಿ ಆರ್ ಗವಾಯಿ, ಜಸ್ಟೀಸ್ ವಿಕ್ರಮ ನಾಥ್ ಹಾಗೂ ಜಸ್ಟೀಸ್ ಸಂಜಯ್ ಕರೋಲ್ ಅವರಿದ್ದ ಪೀಠವು, ಈ ವರ್ಷ ಎಫ್‌ಎಟಿಎಫ್ ನಡೆಸುತ್ತಿರುವ ಪರಿಶೀಲನೆ ಮತ್ತು ಸುಗಮ ವರ್ಗಾವಣೆಯನ್ನು ಸಕ್ರಿಯಗೊಳಿಸಲು ಮಿಶ್ರಾ ಅವರ ಅಧಿಕಾರಾವಧಿಯು ಜುಲೈ 31ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದೆ. ವಾಸ್ತವದಲ್ಲಿ ಸರ್ಕಾರದ ಅಧಿಸೂಚನೆಯ ಪ್ರಕಾರ, 2023ರ ನವೆಂಬರ್ 18ರವರೆಗೆ ಸಂಜಯ್ ಕುಮಾರ್ ಮಿಶ್ರಾ ಅವರು ಇ ಡಿ ನಿರ್ದೇಶಕಾರಗಿ ಮುಂದುವರಿಯಬೇಕಿತ್ತು.
ಕೇಂದ್ರ ಸರ್ಕಾರವು 2018ರ ನವೆಂಬರ್ 19ರಂದು ಮೊದಲ ಬಾರಿಗೆ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಕ ಮಾಡಿತು. 2020ರ ನವೆಂಬರ್ 13ರಂದು ಆದೇಶ ಹೊರಡಿಸಿದ ಕೇಂದ್ರ ಸರ್ಕಾರವು, ಅವರ ನೇಮಕ ಆದೇಶವನ್ನು ತಿದ್ದುಪಡಿ ಮಾಡಿ, ಅಧಿಕಾರವಧಿಯನ್ನು ಮೂರು ವರ್ಷದವರೆಗೆ ವಿಸ್ತರಿಸಿತು.
ಈ ಸುದ್ದಿಯನ್ನೂ ಓದಿ: Supreme Court: ಇಡಿ ಡೈರೆಕ್ಟರ್ ಅಧಿಕಾರಾವಧಿ ವಿಸ್ತರಣೆ ಅಕ್ರಮ ಎಂದ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ಹಿನ್ನಡೆ
ಇಷ್ಟು ಮಾತ್ರವಲ್ಲದೇ ಕಳೆದ ವರ್ಷ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಡ್ಡಾಯ ಅವಧಿಯಿಂದ ಮೂರು ವರ್ಷಗಳವರೆಗೆ ವಿಸ್ತರಣೆ ಮಾಡಿತ್ತು. ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಯನ್ನು ನಿಯಮಬಾಹಿರವಾಗಿ ವಿಸ್ತರಿಸುವ ಮೂಲ ಕೇಂದ್ರ ಸರ್ಕಾರ ತನಗೆ ಬೇಕಾದವರನ್ನು ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡುತ್ತಿದೆ ಎಂದು ಪ್ರತಿ ಪಕ್ಷಗಳು ಆರೋಪಿಸಿದ್ದವು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಕೂಡ ದಾಖಲಾಗಿತ್ತು.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.