ಮುಂಬೈ: ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಶಿವಸೇನಾ ನಾಯಕ ಸಂಜಯ್ ರಾವತ್ (Sanjay Raut) ಅವರು, ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಹೊಗಳಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಪಾತ್ರ ಚಾಳ್ ಪ್ರಾಜೆಕ್ಟ್‌ನಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿಂದ ಅವರು ಜೈಲಿನಲ್ಲಿದ್ದರು. ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ಬಂಡಾಯ ಏಳಲು ಬಿಜೆಪಿಯ ಕಾರಣ ಎಂದು ಅವರು ಈ ಹಿಂದೆ ಆರೋಪಿಸಿದ್ದರು. ಈಗ ಫಡ್ನವಿಸ್ ಅವರನ್ನು ಹೊಗಳುವ ಪರಿ ನೋಡಿದರೆ, ಸಂಜಯ್ ರಾವತ್ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಬಹುದು ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿವೆ!
ಮಹಾರಾಷ್ಟ್ರದಲ್ಲಿ ಈಗ ಹೊಸ ಸರ್ಕಾರವಿದ್ದು, ಕೆಲವು ಒಳ್ಳೆಯ ನಿರ್ಧಾರಗಳನ್ನು ಕೈಗೊಂಡಿದೆ. ನಾವು ಕೇವಲ ವಿರೋಧಿಸುವುದಕ್ಕಾಗಿಯೇ ಎಲ್ಲವನ್ನು ವಿರೋಧಿಸುವುದಿಲ್ಲ. ನಿಜವಾಗಲೂ ದೇವೇಂದ್ರ ಫಡ್ನವಿಸ್ ಅವರು ಒಳ್ಳೆಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಜೈಲಿನಲ್ಲಿದ್ದಾಗ ಅವಕಾಶ ಸಿಕ್ಕಾಗ ನಾನು ಪತ್ರಿಕೆಯಲ್ಲಿ ಈ ಬಗ್ಗೆ ಓದಿದ್ದೇನೆ. ಬಡವರಿಗೆ ಮನೆ ಒದಗಿಸುವ ಚರ್ಚೆಗಳು ನಿಜವಾಗಿ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.
ಎಂಎಚ್ಎಡಿಎ(ಮಹಾರಾಷ್ಟ್ರ ಹೌಸಿಂಗ್ ಆ್ಯಂಡ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ)ಗೆ ಇದ್ದ ಅಧಿಕಾರವನ್ನು ನಮ್ಮ ಸರ್ಕಾರ(ಮಹಾ ವಿಕಾಸ್ ಆಘಾಡಿ)ವು ಕಿತ್ತುಕೊಂಡಿತ್ತು. ಇದು ನನಗೆ ಇಷ್ಟವಾಗಿರಲಿಲ್ಲ. ಆದರೆ, ಈಗ ಫಡ್ನವಿಸ್ ಅವರು ಮತ್ತೆ ಎಂಎಚ್‌ಡಿಎಗೆ ಹಕ್ಕುಗಳನ್ನು ನೀಡಿದ್ದಾರೆ. ಫಡ್ನವಿಸ್ ಒಳ್ಳೆಯ ಕೆಲಸ ಮಾಡಿದ್ದಾರೆಂದು ಅವರು ತಿಳಿಸಿದರು. ಇದೇ ವೇಳೆ, ಸಾರ್ವಜನಿಕ ಕೆಲಸಕ್ಕಾಗಿ ಶೀಘ್ರವೇ ಅವರನ್ನು ಭೇಟಿಯಾಗಲಿದ್ದೇನೆ ಎಂದೂ ಅವರು ಇದೇ ವೇಳೆ ತಿಳಿಸಿದರು.
ಸಂಜಯ್ ರಾವತ್ ಅವರ ಹೊಗಳಿಕೆಯು ಕೇವಲ ದೇವೇಂದ್ರ ಫಡ್ನವಿಸ್ ಅವರಿಗೆ ಮಾತ್ರವೇ ಸೀಮಿತವಾಗಿತ್ತು. ಅಪ್ಪಿತಪ್ಪಿಯೂ ಅವರು ಸಿಎಂ ಏಕನಾಥ ಶಿಂಧೆ ಬಗ್ಗೆ ಮಾತನಾಡಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ಶಿವಸೇನೆಯನ್ನು ಇಬ್ಭಾಗ ಮಾಡಿ ಏಕನಾಥ ಶಿಂಧೆ ಅವರು ಬಿಜೆಪಿ ಜತೆ ಕೈಜೋಡಿಸಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ | Money Laundering Case | ಶಿವಸೇನೆ ನಾಯಕ ಸಂಜಯ್ ರಾವತ್‌ಗೆ ಜಾಮೀನು ನೀಡಿದ ಮುಂಬೈ ಕೋರ್ಟ್