Site icon Vistara News

ಮಹಾ ಬಿಕ್ಕಟ್ಟಿನ ನಡುವೆಯೇ ಉದ್ಧವ್ ಠಾಕ್ರೆ ಬಣದ ಟ್ರಬಲ್‌ ಶೂಟರ್‌ ಸಂಜಯ್‌ ರಾವತ್‌ಗೆ ಇ.ಡಿ ಸಮನ್ಸ್‌

ಮುಂಬಯಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಅಲ್ಲೋಲಕಲ್ಲೋಲ ನಡೆಯತ್ತಿರುವ ನಡುವೆಯೇ ಉದ್ಧವ್‌ ಠಾಕ್ರೆ ಬಣದ ಟ್ರಬಲ್‌ ಶೂಟರ್‌ ಸಂಜಯ್‌ ರಾವತ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿಗೊಳಿಸಿದೆ. ಭೂ ಹಗರಣಕ್ಕೆ ಸಂಬಂಧಿಸಿ ಈ ಸಮನ್ಸ್‌ ನೀಡಲಾಗಿದೆ. ಆದರೆ, ಮಹಾರಾಷ್ಟ್ರ ಬಿಕ್ಕಟ್ಟಿನ ಸಂದರ್ಭದಲ್ಲೇ ಸಮನ್ಸ್‌ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಅದರ ಜತೆಗೆ ಮಂಗಳವಾರವೇ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.
ಈ ಸಮನ್ಸ್‌ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಇದು ಬಿಜೆಪಿ ಕಡೆಗಿನ ಇ.ಡಿಯ ʻನಿಜವಾದ ಭಕ್ತಿʼ ಎಂದು ಗೇಲಿ ಮಾಡಿದ್ದಾರೆ.

ಸಮರ್ಥಿಸಿಕೊಂಡ ಬಿಜೆಪಿ
ಇದೇ ವೇಳೆ, ಸಂಜಯ್‌ ರಾವತ್‌ಗೆ ನೀಡಿರುವ ಸಮನ್ಸನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಹಣಕಾಸು ಅವ್ಯವಹಾರಗಳು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಬಯಲಾದಾಗ ಇಂಥ ಘಟನೆಗಳು ನಡೆದೇ ನಡೆಯುತ್ತವೆ. ಇ.ಡಿ ಒಂದೇ ದಿನದಲ್ಲಿ ಕ್ರಮ ತೆಗೆದುಕೊಳ್ಳುವುದಿಲ್ಲ. ಅವರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ ಅಷ್ಟೆ ಎಂದು ಬಿಜೆಪಿ ಶಾಸಕ ರಾಮ್‌ ಕದಂ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ ವಾಗ್ದಾಳಿ
ʻʻಈ ಬೆಳವಣಿಗೆಯನ್ನು ನಾವು ನಿರೀಕ್ಷಿಸಿದ್ದೆವು. ಸಂಜಯ್‌ ರಾವತ್‌ ಅವರಿಗೆ ಸಮನ್ಸ್‌ ನೀಡಿ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ನಿರೀಕ್ಷಿತ. ಮೋದಿ ಅವರು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಅದರೆ, ಅವರ ಸರಕಾರ ಮಾತ್ರ ಎಲ್ಲರಿಗೂ ಗೊತ್ತಾಗುವಂತೆ, ಯಾವುದೇ ನಾಚಿಕೆ ಇಲ್ಲದೆ ವಿರೋಧ ಪಕ್ಷಗಳ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದೆ ಮತ್ತು ಪ್ರತಿಪಕ್ಷದ ಸರಕಾರಗಳನ್ನು ಉರುಳಿಸುತ್ತಿದೆʼʼ ಎಂದು ತೃಣಮೂಲ ಕಾಂಗ್ರೆಸ್‌ ನಾಯಕ ಸುಕೇತ್‌ ಗೋಖಲೆ ಟ್ವೀಟ್‌ ಮಾಡಿದ್ದಾರೆ.

ಏನಿದು ಪತ್ರಾ ಚಾಲ್‌ ಭೂ ಹಗರಣ?
ಪತ್ರಾ ಚಾಲ್‌ ಭೂಹಗರಣ ಎನ್ನುವುದು ೧೦೩೪ ಕೋಟಿ ರೂ. ಹಗರಣ ಎಂದು ಹೇಳಲಾಗಿದೆ. ಇದರಲ್ಲಿ ಪ್ರಧಾನವಾಗಿರುವುದು ಸಂಜಯ್‌ ರಾವತ್‌ ಅವರ ಪತ್ನಿ ವರ್ಷಾ ರಾವತ್‌. ಈ ಹಗರಣ ಹಿಂದೆಯೇ ಬೆಳಕಿಗೆ ಬಂದು ಸಂಜಯ್‌ ರಾವತ್‌ ಅವರ ಆಪ್ತರಾದ ಪ್ರವೀಣ್‌ ರಾವತ್‌ ಅವರಿಗೆ ಸೇರಿದ ೯ ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ವರ್ಷಾ ರಾವತ್‌ ಅವರಿಗೆ ಸೇರಿದ ೨ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಭೂಮಿಗೆ ಸಂಬಂಧಿಸಿದ ದಾಖಲೆ ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದಕ್ಕೆ ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎನ್ನುವುದು ಪ್ರಧಾನ ಆರೋಪ. ಪ್ರವೀಣ್‌ ರಾವತ್‌ ಅವರು ಸುಮಾರು ೫೫ ಕೋಟಿ ರೂಪಾಯಿಯನ್ನು ವರ್ಷಾ ಅವರ ಖಾತೆಗೆ ಹಸ್ತಾಂತರಿಸಿದ್ದನ್ನು ಇ.ಡಿ ಗಮನಿಸಿದೆ. ಇದರ ಜತೆಗೆ ಸಂಜಯ್‌ ರಾವತ್‌ ಮತ್ತು ಅವರ ಆಪ್ತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನ ಯಾನ ಟಿಕೆಟ್‌ಗಳನ್ನು ಕೊಡಿಸಿರುವುದು ಬೆಳಕಿಗೆ ಬಂದಿದೆ.

ಯಾಕೆ ಈಗ ಪ್ರಮುಖ?
ಪ್ರಸಕ್ತ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿ ಉದ್ಧವ್‌ ಠಾಕ್ರೆ ಅವರ ಪರವಾಗಿ ಬಲವಾಗಿ ನಿಂತಿರುವುದು ಸಂಸದರಾಗಿರುವ ಸಂಜಯ್‌ ರಾವತ್‌ ಮಾತ್ರ. ಅವರು ಕಾನೂನು ಪರಿಣಿತರೂ ಆಗಿದ್ದು ಕಾನೂನು ಹೋರಾಟಕ್ಕೆ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ. ಉದ್ಧವ್‌ ಠಾಕ್ರೆ ಅವರ ಬಲವನ್ನು ಮುರಿಯುವುದಕ್ಕಾಗಿ ಇ.ಡಿ ಯನ್ನು ಬಳಸಿಕೊಳ್ಳಲಾಗಿದೆ ಎನ್ನುವುದು ವಿಪಕ್ಷಗಳ ಆರೋಪ.

ಇದನ್ನೂ ಓದಿ| Maha politics: ಬೀದಿಯಲ್ಲಿ ನೋಡಿಕೊಳ್ತೀವಿ ಎಂದ ರಾವತ್‌, ಮಹಾ ಸಂಘರ್ಷಕ್ಕೆ ತಿರುಗುತ್ತಾ ಬಂಡಾಯ?

Exit mobile version