Site icon Vistara News

SS Badrinath: ಬಡವರ ಆಶಾಕಿರಣ; ಶಂಕರ ನೇತ್ರಾಲಯದ ಸಂಸ್ಥಾಪಕ ಬದ್ರಿನಾಥ್‌ ಇನ್ನಿಲ್ಲ

Dr SS Badrinath

Sankara Nethralaya founder Dr SS Badrinath passes away at 83

ಚೆನ್ನೈ: ದೇಶಾದ್ಯಂತ ಸಾವಿರಾರು ಅಂಧರ ಬಾಳಿಗೆ ಬೆಳಕಾದ, ಲಕ್ಷಾಂತರ ಜನರ ಕಣ್ಣಿನ ಸಮಸ್ಯೆ ನೀಗಿಸಿದ ಖ್ಯಾತಿ ಹೊಂದಿರುವ ಶಂಕರ ನೇತ್ರಾಲಯದ (Sankara Nethralaya) ಸಂಸ್ಥಾಪಕ ಡಾ. ಎಸ್‌.ಎಸ್.‌ ಬದ್ರಿನಾಥ್‌ (Dr SS Badrinath) ಅವರು ಮಂಗಳವಾರ (ನವೆಂಬರ್‌ 21) ಬೆಳಗ್ಗೆ ನಿಧನರಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಡಾ. ಎಸ್‌.ಎಸ್.‌ ಬದ್ರಿನಾಥ್‌ ಅವರು ನಿಧನರಾಗಿದ್ದು, ಅವರಿಗೆ 83 ವರ್ಷ ವಯಸ್ಸಾಗಿತ್ತು. ನಿಧನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ರಾಮ ಸುಗಂಧನ್‌ ಅವರು ಡಾ. ಎಸ್‌. ಎಸ್‌. ಬದ್ರಿನಾಥ್‌ ಅವರು ನಿಧನರಾಗಿರುವುದನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿದ್ದಾರೆ. “ಶಂಕರ ನೇತ್ರಾಲಯದ ಸಂಸ್ಥಾಪಕ ಡಾ. ಎಸ್‌.ಎಸ್. ಬದ್ರಿನಾಥ್‌ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಡಾ. ಎಸ್‌.ಎಸ್. ಬದ್ರಿನಾಥ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಬಡ ರೋಗಿಗಳ ಕಣ್ಣಿನ ಸಮಸ್ಯೆಯನ್ನು ನೀಗಿದ, ಅವರ ಬಾಳಿಗೆ ಬೆಳಕಾದ ಮಹನೀಯರ ಕೊಡುಗೆ ಶ್ಲಾಘನೀಯ” ಎಂದಿದ್ದಾರೆ.

1940ರ ಫೆಬ್ರವರಿ 24ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಡಾ.ಎಸ್‌.ಎಸ್‌. ಬದ್ರಿನಾಥ್‌ ಅವರು ತಮಿಳುನಾಡಿನಲ್ಲಿ ಪದವಿ ಮುಗಿಸಿ, ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ವಿದೇಶದಲ್ಲಿಯೇ ನೆಲೆಸದೆ, ಭಾರತಕ್ಕೆ ಬಂದ ಬದ್ರಿನಾಥ್‌ ಅವರು 1978ರಲ್ಲಿ ಶಂಕರ ಆಸ್ಪತ್ರೆ ಸ್ಥಾಪಿಸಿದರು. ಶಂಕರ ಆಸ್ಪತ್ರೆಯು ಈಗ ದೇಶದಲ್ಲಿಯೇ ಬೃಹತ್‌ ಚಾರಿಟೆಬಲ್‌ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಸಾವಿರಾರು ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ಅವರು ಬೃಹತ್‌ ಆಸ್ಪತ್ರೆಯನ್ನು ನಿರ್ಮಿಸಿದರು.

ಇದನ್ನೂ ಓದಿ: Death News : ಬಂಗಾರಪೇಟೆ ಮಾಜಿ ಶಾಸಕ ಸಿ. ವೆಂಕಟೇಶಪ್ಪ ಇನ್ನಿಲ್ಲ; ಬಂಡುಕೋರನಾಗಿಯೂ ಗೆದ್ದಿದ್ದರು!

ಕರ್ನಾಟಕದ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಶಂಕರ ನೇತ್ರಾಲಯಗಳಿವೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಶಂಕರ ಆಸ್ಪತ್ರೆಗಳು ಆಶಾಕಿರಣವಾಗಿವೆ. ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಸಿಗಬೇಕು ಎಂಬುದು ಸಂಸ್ಥಾಪಕರ ಮಹೋನ್ನತ ಧ್ಯೇಯವಾಗಿತ್ತು ಎಂದು ತಿಳಿದುಬಂದಿದೆ. ಡಾ.ಎಸ್‌.ಎಸ್‌. ಬದ್ರಿನಾಥ್‌ ಅವರ ನಿಧನಕ್ಕೆ ವೈದ್ಯಕೀಯ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Exit mobile version