Site icon Vistara News

Narendra Modi: ಸಂಸ್ಕೃತ ವೈಜ್ಞಾನಿಕ ಭಾಷೆ, ದೇಶದ ಅಸ್ಮಿತೆ; ಕಾಶಿಯಲ್ಲಿ ಮೋದಿ ಬಣ್ಣನೆ

Narendra Modi

PM Narendra Modi hits back at Rahul Gandhi over 'Shakti' remark, says 'I accept the challenge'

ವಾರಾಣಸಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಕ್ಷೇತ್ರವಾದ ವಾರಾಣಸಿಗೆ ತೆರಳಿದ್ದು, ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ ಸಂಸದ್‌ ಸಂಸ್ಕೃತ ಪ್ರತಿಯೋಗಿತಾ (Sansad Sanskrit Pratiyogita) ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸ್ಕೃತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಇದೇ ವೇಳೆ ಮಾತನಾಡಿದ ನರೇಂದ್ರ ಮೋದಿ, “ಸಂಸ್ಕೃತವು (Sanskrit Language) ವೈಜ್ಞಾನಿಕ ಭಾಷೆಯಾಗಿದ್ದು, ದೇಶದ ಅಸ್ಮಿತೆಯಾಗಿದೆ” ಎಂದು ಬಣ್ಣಿಸಿದರು.

“ಭಾರತದ ಪ್ರತಿಷ್ಠೆಯಲ್ಲಿ ಸಂಸ್ಕೃತದ ಕೊಡುಗೆ ಜಾಸ್ತಿ ಇದೆ ಎಂಬ ಮಾತಿದೆ. ಸಂಸ್ಕೃತವು ವೈಜ್ಞಾನಿಕ ಭಾಷೆಯಾಗಿದೆ. ಖಗೋಳಶಾಸ್ತ್ರದಲ್ಲಿ ಸೂರ್ಯಸಿದ್ಧಾಂತ ಗ್ರಂಥ, ಗಣಿತದ ಆರ್ಯಭಟ್ಟ, ಲೀಲಾವತಿ, ವೈದ್ಯಕೀಯ ವಿಜ್ಞಾನದಲ್ಲಿ ಚರಕ ಹಾಗೂ ಸುಶ್ರೂತ ಸಂಹಿತಾ ಸೇರಿ ಬೃಹತ್‌ ಸಂಹಿತಾದಂತಹ ಗ್ರಂಥಗಳನ್ನು ಸಂಸ್ಕೃತದಲ್ಲಿಯೇ ರಚಿಸಲಾಗಿತ್ತು. ಸಾಹಿತ್ಯ, ಸಂಗೀತ ಹಾಗೂ ಕಲೆಯ ಹಲವು ಪ್ರಕಾರಗಳು ಸಂಸ್ಕೃತದಿಂದಲೇ ಜನಿಸಿವೆ. ಇದರಿಂದಾಗಿಯೇ ಭಾರತವು ಜಗತ್ತಿನಲ್ಲಿ ಹೆಸರು ಗಳಿಸಿದೆ” ಎಂದು ತಿಳಿಸಿದರು.

ಕಾಶಿ ಜ್ಞಾನದ ರಾಜಧಾನಿ

ಕಾಶಿಯ ಕುರಿತು ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದರು. “ಕಾಶಿಯು ಈಗ ಜ್ಞಾನದ ರಾಜಧಾನಿಯಾಗಿದೆ. ಕಾಶಿಯು ಶಿವನ ನೆಲೆಯಾಗಿದೆ. ಇದು ಬುದ್ಧನ ಉಪದೇಶಗಳ ಭೂಮಿಯೂ ಆಗಿದೆ. ಕಾಶಿಯು ಜೈನ ತೀರ್ಥಂಕರರ ಜನ್ಮಸ್ಥಳವಾಗಿದೆ. ಆದಿ ಶಂಕರಾಚಾರ್ಯರ ಬೋಧನೆಗಳೂ ಇಲ್ಲಿವೆ. ವಿಶ್ವನಾಥ ಮಂದಿರವು ನ್ಯಾಯಶಾಸ್ತ್ರವನ್ನು ಪುನರುಜ್ಜೀವನಗೊಳಿಸುತ್ತಿದೆ. ಕಾಶಿ ಇಂದು ವಿಕಾಸ ಹಾಗೂ ಪರಂಪರೆಯ (ವಿರಾಸತ್)‌ ಸಂಕೇತವಾಗಿ ಮಿನುಗುತ್ತಿದೆ. ಅಯೋಧ್ಯೆಯ ರಾಮಮಂದಿರವೂ ದೇಶದಲ್ಲಿ ಇಂತಹ ಸ್ಥಾನವನ್ನು ಪಡೆಯಲಿದೆ” ಎಂದು ತಿಳಿಸಿದರು.

ಇದನ್ನೂ ಓದಿ: PM Narendra Modi: ರೈತರಿಗೆ ನೀಡಿದ ಭರವಸೆ ಈಡೇರಿಸಲು ಬದ್ಧ: ಕಬ್ಬು ಬೆಲೆ ಏರಿಸಿದ ಬಳಿಕ ನರೇಂದ್ರ ಮೋದಿ ಸ್ಪಷ್ಟೋಕ್ತಿ

“ಕಾಶಿಯಲ್ಲಿ ಈಗ ದೇವಾಲಯ, ಭವನಗಳೂ ನಿರ್ಮಾಣವಾಗುತ್ತಿವೆ, ರಸ್ತೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳೂ ಜಾರಿಯಾಗಿವೆ. ಕಾಶಿಯಲ್ಲಿ ಈಗ ಪರಂಪರೆಯೂ ನೆಲೆಸಿದೆ, ಸಂಸ್ಕೃತವೂ ಇದೆ ಹಾಗೂ ವಿಜ್ಞಾನವೂ ಇದೆ. ಕಾಶಿ ವಿಶ್ವನಾಥ ಕಾರಿಡಾರ್‌ ಈಗ ಅಭಿವೃದ್ಧಿಯ ಸಂಕೇತವಾಗಿದೆ” ಎಂದು ಬಣ್ಣಿಸಿದರು. ವಾರಾಣಸಿ ಭೇಟಿಯಲ್ಲಿ ನರೇಂದ್ರ ಮೋದಿ ಅವರು ಸುಮಾರು 14 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದರು. ಹೆದ್ದಾರಿ ಸೇರಿ ಸೇರಿ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version