ನವದೆಹಲಿ: ಉತ್ತರಾಖಂಡದ (Uttarakhand) ಎಲ್ಲ ಮದರಸಗಳಲ್ಲಿ ಕಡ್ಡಾಯವಾಗಿ ಸಂಸ್ಕೃತ (Sanskrit) ಕಲಿಸಲಾಗುವುದು ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ಚೇರ್ಮನ್ ಶಾದಾಬ್ ಶಾಮ್ಸ್ (Uttarakhand Waqf Board chairman Shadab Shams) ಹೇಳಿದ್ದಾರೆ. ವಿಜ್ಞಾನ, ಗಣಿತ, ಅರೇಬಿಕ್ ಮತ್ತು ಸಂಸ್ಕೃತ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ಹೊಂದಿರುವ ಮದರಸಾಗಳನ್ನು ಆಧುನೀಕರಿಸುವ ತಮ್ಮ ಯೋಜನೆಯಡಿಯಲ್ಲಿ 117 ಮದರಸಾಗಳಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ(Madrasa Education).
ಮಂಡಳಿಯು ಸಂಸ್ಕೃತ ಮತ್ತು ಅರೇಬಿಕ್ ಎರಡಕ್ಕೂ ಶಿಕ್ಷಕರನ್ನು ನೇಮಿಸಲಿದೆ. ನಾವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರೀತಿಸಬೇಕು ಮತ್ತು ಅದನ್ನು ಗೌರವಿಸಬೇಕು. ನಾವು ಮದರಸಾಗಳಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಎರಡಕ್ಕೂ ಶಿಕ್ಷಕರನ್ನು ನೇಮಿಸುತ್ತೇವೆ. ಇದರಿಂದ ಅವರು ನಮ್ಮ ಸಂಸ್ಕೃತಿಯನ್ನು ಕಲಿಯಬಹುದು. ಮದರಸಾ ವಿದ್ಯಾರ್ಥಿಗಳು ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಯಬೇಕು ವಕ್ಫ್ ಬೋರ್ಡ್ ಅಧ್ಯಕ್ಷ ಶಾಬಾದ್ ಶಾಮ್ಸ್ ಹೇಳಿದ್ದಾರೆ. ಮಕ್ಕಳನ್ನು ಸುಶಿಕ್ಷತರನ್ನಾಗಿ ಮಾಡಲು ಅಗತ್ಯವಿರುವ ಎಲ್ಲ ಸಹಕಾರ, ನೆರವು ನೀಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿಗಳು ಹೇಳಿದ್ದಾರೆಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Shivamogga News: ನಾವೆಲ್ಲ ಭಾರತೀಯರು ಎಂಬ ಘೋಷಣೆಯೊಂದಿಗೆ ಮದರಸ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ
ಮುಖ್ಯವಾಗಿ ಬಡ ಮಕ್ಕಳು ಮತ್ತು ಅನಾಥರು ಮದರಸಾಗಳಿಗೆ ಹೋಗುತ್ತಾರೆ. ಅವರಿಗೆ ಸಾಂಪ್ರದಾಯಿಕವಾಗಿ ಕೇವಲ ಅರೇಬಿಕ್ ಮತ್ತು ಕುರಾನ್ ಕಲಿಸಲಾಗುತ್ತದೆ. ಇಂತಹ ಹಿನ್ನೆಲೆಯ ಮಕ್ಕಳಿಗೆ ಅವಕಾಶ ಸಿಕ್ಕರೆ, ಎಂಜಿನಿಯರ್, ವಿಜ್ಞಾನಿ, ಡಾಕ್ಟರ್ ಆಗಬಹುದು. ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೇ ಪರಿಪೂರ್ಣ ಉದಾಹರಣೆ ಎಂದು ಶಾಮ್ಸ್ ಹೇಳಿದ್ದಾರೆ.
ಮದರಸಗಳಲ್ಲಿ ಕುರಾನ್ ಮತ್ತು ಹದೀಸ್ ಕಲಿಕೆ ಮುಗಿದ ನಂತರ, 8.30 ಗಂಟೆ ನಂತರ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡಲಾಗುವುದು. ಈ ತರಗತಿಗಳು ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಮದರಸಗಳ ಆಧುನೀಕರಣವು, ಪಠ್ಯದ ಜತೆಗೆ ಅಧ್ಯಯನ ಬೆಂಚುಗಳು ಮತ್ತು ಸಮವಸ್ತ್ರಗಳ ಪರಿಚಯದಂತಹ ಮೂಲಸೌಕರ್ಯಗಳ ಉನ್ನತೀಕರಣವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.