Site icon Vistara News

Saraswati Idol: ಕಾಲೇಜಿನಲ್ಲಿ ಸೀರೆ ಇಲ್ಲದ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ; ಬೃಹತ್ ಪ್ರತಿಭಟನೆ

Saraswati Idol

Saraswati Idol Without Saree Sparks Huge Row At Tripura College

ಅಗರ್ತಲಾ: ತ್ರಿಪುರದ ಸರ್ಕಾರಿ ಕಾಲೇಜೊಂದರಲ್ಲಿ ಸರಸ್ವತಿ ಪೂಜೆಯ (Saraswati Puja) ವೇಳೆ ಮೂರ್ತಿಗೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿದೆ. ಕಾಲೇಜಿನಲ್ಲಿ (Government College) ಪ್ರತಿಷ್ಠಾಪಿಸಲಾದ ಸರಸ್ವತಿ ಮೂರ್ತಿಗೆ ಸೀರೆ ತೊಡಿಸಿಲ್ಲ ಎಂಬ ಕಾರಣಕ್ಕಾಗಿ ಎಬಿವಿಪಿ ಹಾಗೂ ಬಜರಂಗದಳ ಸೇರಿ ಹಲವು ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ಸೀರೆ ಇಲ್ಲದ ಸರಸ್ವತಿ ಮೂರ್ತಿಯ (Saraswati Idol) ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗುತ್ತಲೇ ಭಾರಿ ವಿವಾದ ಉಂಟಾಗಿದೆ.

ತ್ರಿಪುರ ರಾಜಧಾನಿ ಅಗರ್ತಲಾದಲ್ಲಿರುವ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ. ಸರಸ್ವತಿ ಪೂಜೆಗಾಗಿ ವಿದ್ಯಾರ್ಥಿಗಳೇ ಸರಸ್ವತಿ ಮೂರ್ತಿಯನ್ನು ತಯಾರಿಸಿದ್ದಾರೆ. ಆದರೆ, ಸೀರೆಯೇ ಇಲ್ಲದ, ಅಶ್ಲೀಲವಾಗಿ ಕಾಣುವ, ಭಾರತೀಯ ಸಂಪ್ರದಾಯದಂತೆ ಸರಸ್ವತಿ ಮೂರ್ತಿಯನ್ನು ತಯಾರಿಸಿಲ್ಲ ಎಂದು ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿವೆ.

“ವಸಂತ ಪಂಚಮಿ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಸ್ವತಿ ಪೂಜೆ ಮಾಡಲಾಗುತ್ತದೆ. ಆದರೆ, ತ್ರಿಪುರ ಕಾಲೇಜಿನಲ್ಲಿ ಮಾತ್ರ ಸರಸ್ವತಿ ಮೂರ್ತಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಸರಸ್ವತಿ ದೇವಿಯ ಮೂರ್ತಿಯನ್ನು ಆಕ್ಷೇಪಾರ್ಹವಾಗಿ ನಿರ್ಮಿಸಲಾಗಿದೆ. ಇದರ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಎಬಿವಿಪಿ ತ್ರಿಪುರ ಘಟಕದ ಪ್ರಧಾನ ಕಾರ್ಯದರ್ಶಿ ದಿವಾಕರ್‌ ಅಚರ್ಜಿ ಮಾಹಿತಿ ನೀಡಿದ್ದಾರೆ. ಎಬಿವಿಪಿ ಪ್ರತಿಭಟನೆಗೆ ಹಲವು ಹಿಂದು ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ.

ಇದನ್ನೂ ಓದಿ: Ambedkar Statue Vandalised | ತಮಿಳುನಾಡಿನಲ್ಲಿ ಅಂಬೇಡ್ಕರ್‌ ಮೂರ್ತಿ ಧ್ವಂಸ, ಇಬ್ಬರ ಬಂಧನ

ಸರಸ್ವತಿ ಮೂರ್ತಿಯನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಲೇಜು ಆಡಳಿತ ಮಂಡಳಿಯನ್ನು ಹಿಂದು ಸಂಘಟನೆಗಳು ಆಗ್ರಹಿಸಿವೆ. ಅಷ್ಟೇ ಅಲ್ಲ, ಕೂಡಲೇ ಕಾಲೇಜಿಗೆ ತೆರಳಿ ಸರಸ್ವತಿ ಮೂರ್ತಿಗೆ ಸೀರೆ ತೊಡಿಸಿದ್ದಾರೆ. “ತಾಯಿ ಸರಸ್ವತಿಗೆ ಅವಮಾನ ಮಾಡುವುದು ನಮ್ಮ ಉದ್ದೇಶವಲ್ಲ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಆದಾಗ್ಯೂ, ನಾವು ಸರಸ್ವತಿ ಮೂರ್ತಿಯನ್ನು ಬದಲಾಯಿಸಿದ್ದೇವೆ. ಯಾರ ಭಾವನೆಗಳಿಗೂ ಧಕ್ಕೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ” ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version