ಲಂಡನ್: ಪ್ರತಿವರ್ಷ ಆಗಸ್ಟ್ 7ರಂದು ಭಾರತದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆಚರಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ಈ ದಿನಾಚರಣೆಯನ್ನು ಲಂಡನ್‌ನಲ್ಲೂ ನಡೆಸಲಾಗುತ್ತಿದೆ. ಲಂಡನ್‌ನಲ್ಲಿ ವಾಸವಿರುವ ಭಾರತೀಯ ಮೂಲದ ಮಹಿಳೆಯರು ಆಗಸ್ಟ್ 6ರಂದು ಸೀರೆಯುಟ್ಟು ಮೆರವಣಿಗೆ (Saree Walkathon) ಸಾಗಲಿದ್ದಾರೆ.
ಬ್ರಿಟಿಷ್ ವುಮೆನ್ ಇನ್ ಸಾರೀಸ್ ಹೆಸರಿನ ಗುಂಪು ಈ ಸ್ಯಾರಿ ವಾಕಥಾನ್ ಅನ್ನು ಆಯೋಜಿಸುತ್ತಿದೆ. ಇದರಲ್ಲಿ ಭಾರತ ಮೂಲದ ಸುಮಾರು 500 ಮಹಿಳೆಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಟ್ರಾಫಲ್ಗರ್ ಸ್ಕ್ವೇರ್‌ನಿಂದ ಆರಂಭವಾಗುವ ವಾಕಥಾನ್ 10 ಡೌನಿಂಗ್ ಸ್ಟ್ರೀಟ್ ಮೂಲಕ ಹಾದು ಹೋಗಿ ಲಂಡನ್‌ನ ವೆಸ್ಟ್‌ಮಿಮ್‌ಸ್ಟರ್‌ನಲ್ಲಿರುವ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಅಂತ್ಯಗೊಳ್ಳಲಿದೆ.
ಇದನ್ನೂ ಓದಿ: Viral Video : ಲಿಫ್ಟ್ ಹತ್ತಿ ಯಾವ ಫ್ಲೋರ್‌ಗೆ ಹೋಗಬೇಕು ಎನ್ನುವುದನ್ನೂ ಹೇಳುತ್ತದೆ ಈ ಬೆಕ್ಕು!
“ಇಂದಿನ ಮಹಿಳೆಯರು ಆಧುನಿಕತೆ ವಿಚಾರದಲ್ಲಿ ಪ್ರಪಂಚವನ್ನು ಮೀರಿ ಬೆಳೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಸೀರೆಯನ್ನು ಉಟ್ಟು ಎಲ್ಲ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ” ಎಂದು ಬ್ರಿಟಿಷ್ ವುಮೆನ್ ಇನ್ ಸಾರೀಸ್ ಗುಂಪಿನ ಸದಸ್ಯೆಯಾದ ದೀಪ್ತಿ ಜೈನ್ ಅವರು ತಿಳಿಸಿದ್ದಾರೆ.
“ಬ್ರಿಟನ್‌ನ ನಿವಾಸಿಗಳಾಗಿ ನಮ್ಮ ಬೇರಾದ ಭಾರತಕ್ಕೆ ಗೌರವ ಸಲ್ಲಿಸಲು ವೇದಿಕೆ ಸೃಷ್ಟಿಸಿಕೊಳ್ಳುತ್ತಿರುವ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ಊರಿನ ನೇಕಾರರು ಮತ್ತು ಕುಶಲಕರ್ಮಿಗಳ ಕಲೆಯನ್ನು ಪ್ರದರ್ಶಿಸಲು ಮತ್ತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ” ಎಂದೂ ಅವರು ಹೇಳಿದ್ದಾರೆ.
ವಾಕಥಾನ್ ಕಾರ್ಯಕ್ರಮದಲ್ಲಿ ಕೇರಳ ಮೂಲದ 30 ಮಹಿಳೆಯರು ಕೇರಳದ ಸಾಂಪ್ರದಾಯಿಕ ಸೆಟ್ಟು ಮುಂಡು ಮತ್ತು ಕೈಮಗ್ಗ ಸೀರೆಗಳನ್ನು ಪ್ರದರ್ಶಿಸಲಿದ್ದಾರೆ. ಅದನ್ನು ಕೇರಳದಿಂದ ನೇರವಾಗಿ ತರಿಸಿಕೊಳ್ಳಲಾಗಿದೆ. ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಅವರು ಕೇರಳದ ಸಾಂಪ್ರದಾಯಿಕ ನೃತ್ಯವನ್ನೂ ಮಾಡಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.