ಪಟನಾ: ರಾಮನವಮಿ ಮೆರವಣಿಗೆ ವೇಳೆ ಬಿಹಾರದ ಸಾಸಾರಾಮ್ ಹಾಗೂ ಬಿಹಾರ ಷರೀಫ್ ಸೇರಿ ಹಲವೆಡೆ ಹಿಂಸಾಚಾರ ನಡೆದಿದೆ. ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಕಾರಣ ಇದು ಕೋಮುಗಲಭೆಗೆ ಕಾರಣವಾಗಿದೆ. ಅದರಲ್ಲೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಸಾರಾಮ್‌ಗೆ ಆಗಮಿಸುವ ಮೊದಲೇ ಅಲ್ಲಿ ಸ್ಫೋಟ (Sasaram Violence) ಸಂಭವಿಸಿದೆ. ಇನ್ನು ಮುಸ್ಲಿಮರೇ ಮನೆಗಳ ಮೇಲೆ ನಿಂತು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ, “ಮುಸ್ಲಿಮರು ಸ್ವಯಂ ರಕ್ಷಣೆಗಾಗಿ ಬಾಂಬ್ ತಯಾರಿಸುತ್ತಿದ್ದಾರೆ” ಎಂದು ಬಿಹಾರ ಆರ್‌ಜೆಡಿ ಶಾಸಕ ಮೊಹಮ್ಮದ್ ನೆಹಲುದ್ದೀನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಮುಸ್ಲಿಂ ಸಮುದಾಯದ ಕೆಲವರು ಬಾಂಬ್ ತಯಾರಿಸುತ್ತಿದ್ದಾರೆ. ಅವರು ಸ್ವಯಂ ರಕ್ಷಣೆಗಾಗಿ ಬಾಂಬ್ ತಯಾರಿಸುತ್ತಿದ್ದಾರೆಯೇ ಹೊರತು ಬೇರೆ ಕಾರಣಕ್ಕೆ ಅಲ್ಲ. ದಾಳಿಯ ವೇಳೆ ಮುಸ್ಲಿಂ ಸಮುದಾಯದವರು ಮೃತಪಟ್ಟರೆ ಏನು ಮಾಡಬೇಕು? ಮುಸ್ಲಿಮರು ತಮ್ಮ ರಕ್ಷಣೆಗಾಗಿ ಇದನ್ನು ಮಾಡಲೇಬೇಕು. ಸ್ವಯಂ ರಕ್ಷಣೆಗಾಗಿ ಬಾಂಬ್ ತಯಾರಿಸಲೇಬೇಕು. ಇಲ್ಲದಿದ್ದರೆ ಮುಸ್ಲಿಮರು ಬದುಕುಳಿಯುವುದು ಕಷ್ಟ” ಎಂದು ಹೇಳಿದ್ದಾರೆ. ಆರ್‌ಜೆಡಿ ಶಾಸಕ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಹಿಂಸೆಗೆ ಪ್ರಚೋದನೆ ನೀಡಿದಂತೆಯೂ ಎಂದು ಹಲವರು ಟೀಕಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ
ರಾಮನವಮಿ ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನೆಹಲುದ್ದೀನ್ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ದೃಷ್ಟಿಯಿಂದಾಗಿ ಬಿಜೆಪಿಯು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವುದು ಅವರ ಗುರಿಯಾಗಿದೆ. ಹಾಗಾಗಿ, ಗುರಿ ಸಾಧನೆ ಮಾಡುವವರೆಗೆ ಹೀಗೆ ಕೋಮುಗಲಭೆಗಳನ್ನು ಸೃಷ್ಟಿಸುತ್ತದೆ ಎಂದು ಆರೋಪಿಸಿದ್ದಾರೆ.
ಸಾಸಾರಾಮ್ ಜಿಲ್ಲೆಯಲ್ಲಿ ಅಮಿತ್ ಶಾ ಅವರ ರ‍್ಯಾಲಿ ಆಯೋಜನೆ ಮಾಡಲಾಗಿತ್ತು. ಆದರೆ, ಕೋಮುಗಲಭೆ ಹಿನ್ನೆಲೆಯಲ್ಲಿ ಅವರ ರ‍್ಯಾಲಿ ರದ್ದುಗೊಳಿಸಲಾಗಿತ್ತು. ಮಾರ್ಚ್ 2ರಂದು ಬಿಹಾರದ ನಾವಡಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಅಮಿತ್ ಶಾ ಗಲಭೆಕೋರರಿಗೆ ಎಚ್ಚರಿಕೆ ನೀಡಿದ್ದರು. “ಬಿಹಾರದ ಸಾಸಾರಾಮ್ ಹಾಗೂ ಬಿಹಾರ ಷರೀಫ್‌ನಲ್ಲಿ ಗಲಭೆಕೋರರು ಓಡಾಡಿಕೊಂಡಿದ್ದಾರೆ. ಅವರು ಆಗಾಗ ಗಲಭೆ ಮಾಡುತ್ತಲೇ ಇದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆಗೆ ಕಾರಣರಾಗುವವರನ್ನು ಮಟ್ಟ ಹಾಕಲಾಗುವುದು” ಎಂದು ಹೇಳಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇದುವರೆಗೆ 100ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಹಲವೆಡೆ ಈಗಲೂ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: ಮುಸ್ಲಿಮರ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಯೇ ತಪ್ಪು; ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ