Site icon Vistara News

ಟೋಲ್‌ಗಳಿಗೆ ಕೇಂದ್ರ ಸರ್ಕಾರ ವಿದಾಯ; ಬರಲಿದೆ ಸ್ಯಾಟಲೈಟ್‌ ಟೋಲ್‌ ಸಿಸ್ಟಂ, ಏನಿದು?

Nitin Gadkari

Satellite based toll system to be rolled out, will save time and money: Nitin Gadkari

ನವದೆಹಲಿ: ಹೆದ್ದಾರಿಯುದ್ದಕ್ಕೂ ಅತಿಯಾಗಿರುವ ಟೋಲ್‌ಗೇಟ್‌ಗಳು (Tollgates), ಮಿತಿಮೀರಿದ ವಾಹನಗಳ ಸಂಖ್ಯೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಟೋಲ್‌ಗೇಟ್‌ಗಳು ಬಂದರೆ ಕಿರಿಕಿರಿಯಾಗುತ್ತದೆ. ಫಾಸ್ಟ್‌ಟ್ಯಾಗ್‌ ಇದ್ದರೂ ಸಂಚಾರ ದಟ್ಟಣೆ ಹೆಚ್ಚಾಗಿ ಟೋಲ್‌ಗೇಟ್‌ಗಳಲ್ಲಿ ಕಾಯುವ ಪರಿಸ್ಥಿತಿ ಇರುತ್ತದೆ. ಆದರೆ, ಇದನ್ನು ತಪ್ಪಿಸಲು ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಹೊಸ ಯೋಜನೆ ರೂಪಿಸಿದ್ದಾರೆ. ದೇಶದಲ್ಲಿ ಟೋಲ್‌ ಸಂಗ್ರಹಕ್ಕೆ ಟೋಲ್‌ಗೇಟ್‌ಗಳ ಬದಲು, ಸ್ಯಾಟಲೈಟ್‌ ಆಧಾರಿತ ಟೋಲ್‌ ಸಿಸ್ಟಂ (Satellite Based Toll System) ಜಾರಿಗೆ ತರಲು ಮುಂದಾಗಿದ್ದಾರೆ.

ಹೌದು, “ನಾವು ಶೀಘ್ರದಲ್ಲಿಯೇ ದೇಶಾದ್ಯಂತ ಸ್ಯಾಟಲೈಟ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ತರುತ್ತೇವೆ. ಹೊಸ ಯೋಜನೆ ಮೂಲಕ ದೇಶದ ಜನ ಎಷ್ಟು ಕಿಲೋಮೀಟರ್‌ವರೆಗೆ ರಸ್ತೆಯನ್ನು ಬಳಸಿರುತ್ತಾರೋ, ಅಷ್ಟು ಕಿಲೋಮೀಟರ್‌ವರೆಗೆ ಮಾತ್ರ ಟೋಲ್‌ ಸಂಗ್ರಹಿಸಲಾಗುತ್ತದೆ. ಜನರ ಬ್ಯಾಂಕ್‌ ಖಾತೆಯಿಂದಲೇ ಹಣ ಕಡಿತವಾಗುತ್ತದೆ. ಇದರಿಂದ ಸಮಯದ ಜತೆಗೆ ಹಣದ ಉಳಿತಾಯವೂ ಆಗಲಿದೆ” ಎಂಬುದಾಗಿ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು 2021ರಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಿದ್ದು, ಇದರಿಂದ ಟೋಲ್‌ಗೇಟ್‌ಗಳಲ್ಲಿ ಜನರ ಅರ್ಧ ಸಮಯ ಉಳಿದಿದೆ. ಈಗ ಹೊಸ ವ್ಯವಸ್ಥೆ ಮೂಲಕ ಮತ್ತೊಂದು ಕ್ರಾಂತಿಗೆ ನಿತಿನ್‌ ಗಡ್ಕರಿ ಸಾಕ್ಷಿಯಾಗಲಿದ್ದಾರೆ.

ಏನಿದು ತಂತ್ರಜ್ಞಾನ? ಏನೆಲ್ಲ ಉಪಯೋಗ?

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ, ವಾಹನಗಳಿಗೆ ಜಿಪಿಎಸ್‌ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಜಿಪಿಎಸ್‌ ಯಂತ್ರವು ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದಾಗಿ ನಮ್ಮ ವಾಹನವು ಯಾವ ಟೋಲ್‌ ರಸ್ತೆಗೆ ಪ್ರವೇಶ ಪಡೆದಿದೆ, ಯಾವ ರಸ್ತೆಯಿಂದ ನಿರ್ಗಮಿಸಿದೆ ಎಂಬುದನ್ನು ಲೆಕ್ಕ ಹಾಕಿ, ಬ್ಯಾಂಕ್‌ ಖಾತೆಯಿಂದ ಟೋಲ್‌ ಕಡಿತಗೊಳಿಸುತ್ತದೆ.

ಇದನ್ನೂ ಓದಿ: Road Accident : ಬ್ರೇಕ್‌ ಫೇಲ್‌; ಟೋಲ್‌ ಬಳಿ ನಿಂತಿದ್ದ ಪೊಲೀಸ್‌ ಜೀಪ್‌ಗೆ ಲಾರಿ ಡಿಕ್ಕಿ!

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ, ಭಾರತದಲ್ಲಿ ಸಮಯದ ಜತೆಗೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ. ಟೋಲ್‌ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್‌ ಶುಲ್ಕ ಪಾವತಿಸುತ್ತೇವೆ. ಟೋಲ್‌ ಗೇಟ್‌ ನಂತರ ಅರ್ಧ ಕಿಲೋಮೀಟರ್‌ ಇದ್ದರೂ, ಪೂರ್ತಿ ಹಣವನ್ನು ನಾವೀಗ ಪಾವತಿಸಬೇಕು. ಆದರೆ, ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿಸುತ್ತೇವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version