ನವದೆಹಲಿ: ಹವಾಲಾ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಿಲ್ಲಿಯ ಸಚಿವ ಸತ್ಯೇಂದ್ರ ಜೈನ್(Satyendra Jain), ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೋ ಬಹಿರಂಗವಾಗಿದೆ. 6 ನಿಮಿಷದ ಈ ವಿಡಿಯೋ ಕ್ಲಿಪ್‌ನಲ್ಲಿ ಸತ್ಯೇಂದ್ರ ಜೈನ್ ಅವರಿಗೆ ತಲೆ ಮತ್ತು ಕಾಲ್ ಮಸಾಜ್ ಮಾಡುತ್ತಿರುವ ದೃಶ್ಯಗಳಿವೆ.
ತಿಹಾರ್ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರ ಈ ವಿವಿಐಪಿ ಟ್ರೀಟ್ಮೆಂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಏತನ್ಮಧ್ಯೆ, ವಿಡಿಯೋ ಕ್ಲಿಪ್ ಬಹಿರಂಗವಾಗುತ್ತಿದ್ದಂತೆ ಸರ್ಕಾರವು ಜೈಲ್ ಸೂಪರಿಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ?
6 ನಿಮಿಷಗಳ ಈ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಅವರು ಬೆಡ್ ಮೇಲೆ ಮಲಗಿಕೊಂಡು ದಾಖಲೆಪತ್ರಗಳನ್ನು ನೋಡುತ್ತಿರುತ್ತಾರೆ. ಇತ್ತ ವ್ಯಕ್ತಿಯೊಬ್ಬ ಅವರು ಕಾಲುಗಳಿಗೆ ಮಸಾಜ್ ಮಾಡುತ್ತಿರುತ್ತಾನೆ. ಜತೆಗೇ, ಹೆಡ್ ಮಸಾಜ್, ಬೆನ್ನು ಮಸಾಜ್ ಮಾಡಿಕೊಳ್ಳುವುದನ್ನೂ ಕಾಣಬಹುದು.
ಬಿಜೆಪಿ ಟೀಕೆ
ಸತ್ಯೇಂದ್ ಜೈನ್ ಅವರು ಫುಲ್ ವಿವಿಐಪಿ ಮಜಾ ತೆಗೆದುಕೊಳ್ಳುತ್ತಿದ್ದಾರೆಯೇ? ತಿಹಾರ್ ಜೈಲಿನೊಳಗೇ ಮಸಾಜ್? ಕಳೆದು ಐದು ತಿಂಗಳಿಂದ ಜಾಮೀನು ಪಡೆಯಲು ವಿಫಲವಾಗಿರುವ ವ್ಯಕ್ತಿಗೆ ಮಸಾಜ್ ಸೌಲಭ್ಯ ನೀಡಲಾಗುತ್ತಿದೆ. ಆಪ್ ಸರ್ಕಾರದಲ್ಲಿ ಜೈಲು ನಿಯಮಗಳನ್ನು ಮುರಿಯಲಾಗುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜದಾ ಪೂನಾವಾಲ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Jacqueline Boyfriend | ದಿಲ್ಲಿ ಸಚಿವ ಜೈನ್‌ಗೆ ಜಾಕ್ವೆಲಿನ್ ಬಾಯ್‌ಫ್ರೆಂಡ್‌ನಿಂದ 10 ಕೋಟಿ ರೂ. ಪ್ರೊಟೆಕ್ಷನ್ ಮನಿ!