Site icon Vistara News

Cheetah | ಚೀತಾ ಉಳಿಸುವುದೆಂದ್ರೆ ಜಗತ್ತು ಬದಲಾಗುತ್ತಿದೆ ಎಂದರ್ಥ! ಭಾರತದಲ್ಲಿ ಸಂತತಿ ಬೆಳೆಯಬಲ್ಲದೇ?

Cheetah

ನವ ದೆಹಲಿ: ನಮಿಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ಶನಿವಾರ ತಂದು, ವಿದ್ಯುಕ್ತವಾಗಿ ಮಧ್ಯಪ್ರದೇಶದ ಕುನೊ ಅರಣ್ಯಕ್ಕೆ ಸೇರಿಸಲಾಯಿತು. ಆದರೆ, ಈ ಎಂಟು ಚೀತಾಗಳಿಂದ ಭಾರತದಲ್ಲಿ ಅವುಗಳ ಸಂತತಿ ವೃದ್ದಿಯಾಗಲಿದೆಯೇ? ಇದಕ್ಕೆ ಸ್ಪಷ್ಟವಾದ ಉತ್ತರವಿಲ್ಲವಾದರೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಂದ ಭಾರತಕ್ಕೆ ಚೀತಾಗಳನ್ನು ಕರೆತರುವ ಪ್ರಯತ್ನವಂತೂ ನಡೆದಿದೆ. ಚೀತಾ ಸಂರಕ್ಷಣಾ ನಿಧಿ ಪ್ರಧಾನ ನಿರ್ದೇಶಕಿ ಹಾಗೂ ನಮಿಬಿಯಾದಿಂದ ಭಾರತಕ್ಕೆ ಚೀತಾ ಕರೆ ತರುವ ಕಾರ್ಯಕ್ಕೆ ಸಮನ್ವಯಕರರಾಗಿರುವ ಲಾರಿ ಮಾರ್ಕರ್(Laurie Marker) ಅವರು ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಚೀತಾ ಅಳಿವಿನ ನಂತರ, ಬೇರೆ ಕಡೆಯಿಂದಲೇ ನೀವು ಅವುಗಳನ್ನು ತಂದು, ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಇದೊಂದೇ ಅವುಗಳನ್ನು ಹೆಚ್ಚಿಸಲು ಇರುವ ಮಾರ್ಗ. ಹಾಗಾಗಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚೀತಾಗಳನ್ನು ತರಬೇಕಾಗುತ್ತದೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾ ರಾಷ್ಟ್ರಗಳ ಜತೆಗೆ ಭಾರತವು ಮಾತುಕತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾನವರಿಂದಲೇ ಚೀತಾಗಳು ಸಂತತಿ ಅಳಿದಿದೆ ಮತ್ತು ಇದೇ ಮಾನವರಿಂದ ಅವುಗಳ ಸಂತತಿ ವೃದ್ಧಿಯಾಗಲಿದೆ. ಜೀವನದ ವರ್ತುಲದಲ್ಲಿ ಅವು ಕೊಂಡಿಗಳಾಗಿವೆ. ಇಂದಿನ ಸ್ಥಿತಿಯಲ್ಲಿ ಭೂಮಿ ನಾಶವಾಗುತ್ತಿರುವ ಸಂದರ್ಭದಲ್ಲಿ ಚೀತಾಗಳು ಪ್ರಮುಖ ಪಾತ್ರ ನಿರ್ವಹಿಸಲಿವೆ. ಚೀತಾ ಮತ್ತು ನಾವು ಮಾತ್ರವೇ ಈ ಭೂಮಿಯನ್ನು ಸಂರಕ್ಷಿಸಬಲ್ಲೆವು. ಈ ಸಂಗತಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ. ಚೀತಾ ಮರು ಸ್ಥಳಾಂತರ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಕಳೆದ 12 ವರ್ಷಗಳಿಂದಲೂ ಲಾರಿ ಮಾರ್ಕರ್ ಅವರು ಭಾರತ ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚೀತಾ ಬದುಕುಳಿಯಬಲ್ಲವೇ?
ನಮಿಬಿಯಾದಿಂದ ಚೀತಾಗಳನ್ನು ಈಗ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ನಿಜವಾದ ಸವಾಲು ಇನ್ನು ಆರಂಭವಾಗಲಿದೆ. ಈ ಚೀತಾಗಳು ಭಾರತದ ಈ ಅರಣ್ಯದಲ್ಲಿ ಬದುಕಿ ಉಳಿಯಬಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ತಮ್ಮ ಸಹಜ ವಾಸಸ್ಥಾನವನ್ನು ಬಿಟ್ಟು ಮತ್ತು ತುಂಬ ದೂರದ ಪ್ರದೇಶಕ್ಕೆ ಬಂದಿರುವ ಈ ಚೀತಾಗಳು, ಭಾರತದ ಅರಣ್ಯವೇ ತಮ್ಮ ನಿಜವಾದ ವಾಸಸ್ಥಾನವಾಗಲಿದೆ ಎಂಬುದನ್ನು ಅರಿತುಕೊಳ್ಳಲು ದೀರ್ಘ ಸಮಯವು ಬೇಕಾಗುತ್ತದೆ ಎನ್ನುತ್ತಿದ್ದಾರೆ ತಜ್ಞರು.

ನಮಿಬಿಯಾದಿಂದ ಬಂದ ಚೀತಾಗಳಿಗೆ ಬಹುದೊಡ್ಡ ಸವಾಲು- ಇಲ್ಲಿರುವ ಸ್ಥಳೀಯ ಪ್ರಾಣಿಗಳ ಭೀತಿ. ಹೊರಗಿನ ಈ ಪ್ರಾಣಿಗಳ ಮೇಲೆ ಅವು ಮಾರಣಾಂತಿಕವಾಗಿ ದಾಳಿ ನಡೆಸಬಹುದು. ವಿಶೇಷವಾಗಿ, ಚಿರತೆಗಳು, ಪಟ್ಟಿ ಕತ್ತೆಕಿರುಬ, ಗುಳ್ಳೆ ನರಿ ಇತ್ಯಾದಿಗಳು ಕುನೊ ರಾಷ್ಟ್ರೀಯ ಪಾರ್ಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಸಾಮಾನ್ಯವಾಗಿ ಚೀತಾಗಳು ಸಂಘರ್ಷವನ್ನು ತಪ್ಪಿಸಲು ಮುಂದಾಗುತ್ತವೆ. ವೈರಿಗಳಿಂದ ತಪ್ಪಿಸಿಕೊಳ್ಳಲು ಅವು ಶರವೇಗದಲ್ಲಿ ಓಡುತ್ತವೆ. ಆದರೆ, ಅವುಗಳಿಗೆ ಪರಿಚಿತವಲ್ಲದ ಈ ವಾತಾವರಣವು ಅಪಾಯಕಾರಿಯಾಗಿ ಪರಿಣಮಿಸಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ | Fact-Check | ಚೀತಾ ತಂದ ವಿಮಾನಕ್ಕೆ ವಿಶೇಷವಾಗಿ ಈಗೇನು ಹುಲಿಯ ಚಿತ್ರ ಪೇಂಟ್‌ ಮಾಡಿರಲಿಲ್ಲ!

Exit mobile version