Site icon Vistara News

Narendra Modi: ಭಾರತೀಯರು ವಿದೇಶದಲ್ಲಿ ಮದುವೆ ಆಗುತ್ತಿರುವುದಕ್ಕೆ ಮೋದಿ ಆಕ್ಷೇಪ; ಕಾರಣವೂ ಇದೆ

Election Result 2023 is for good governance and Development says PM Narendra Modi

ನವದೆಹಲಿ: ಭಾರತದ ಶ್ರೀಮಂತರು ವಿದೇಶದಲ್ಲಿ ಮದುವೆಯಾಗುತ್ತಿರುವ ಪದ್ಧತಿ ಜಾಸ್ತಿಯಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನ್‌ ಕೀ ಬಾತ್‌ (Mann Ki Baat) ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಉತ್ಪನ್ನಗಳ ಬಳಕೆ ಮಾಡಿ ಎಂದು ಕರೆ ನೀಡಿದರು. ಇದೇ ವೇಳೆ ಅವರು, “ಭಾರತದ ಶ್ರೀಮಂತರು ವಿದೇಶದಲ್ಲಿ ಮದುವೆಯಾಗುತ್ತಿರುವುದು ಜಾಸ್ತಿಯಾಗಿದೆ. ಇದರ ಅವಶ್ಯಕತೆ ಏನಿದೆ” ಎಂದು ಪ್ರಶ್ನಿಸಿದರು.

“ನನಗೆ ತುಂಬ ದಿನಗಳಿಂದ ಒಂದು ವಿಷಯ ಕಾಡುತ್ತಿದೆ. ನನ್ನ ಮನದ ನೋವನ್ನು ನಿಮ್ಮ ಎದುರು ಹೇಳಿಕೊಳ್ಳದೆ, ಇನ್ನಾರ ಬಳಿ ಹೇಳಿಕೊಳ್ಳಲಿ? ಮದುವೆ ವಿಚಾರಕ್ಕೆ ಬಂದರೆ, ಇತ್ತೀಚೆಗೆ ದೇಶದ ಶ್ರೀಮಂತರು ವಿದೇಶದಲ್ಲಿ ಮದುವೆಯಾಗುತ್ತಿದ್ದಾರೆ. ಇದರ ಅವಶ್ಯಕತೆ ಏನಿದೆ? ಭಾರತದ ನೆಲದಲ್ಲಿ, ಭಾರತೀಯರ ಮಧ್ಯೆ ಮದುವೆ ಮಾಡಿಕೊಂಡರೆ, ಮದುವೆಗಾಗಿ ಖರ್ಚಾಗುವ ಹಣವು ದೇಶದಲ್ಲಿಯೇ ಉಳಿಯುತ್ತದೆ. ಇದರಿಂದ ದೇಶದ ಜನರು ನಿಮ್ಮ ಮದುವೆಯ ಭಾಗವಾಗುತ್ತಾರೆ, ಸೇವೆ ನೀಡುತ್ತಾರೆ. ಬಡವರು ಕೂಡ ನಿಮ್ಮಿಂದ ಅನುಕೂಲ ಪಡೆಯುತ್ತಾರೆ. ತಮ್ಮ ಮಕ್ಕಳಿಗೆ ನಿಮ್ಮ ಮದುವೆಯ ಬಗ್ಗೆ ಹೇಳುತ್ತಾರೆ” ಎಂದರು.

“ಇಂತಹ ಹತ್ತಾರು ಕಾರಣಗಳಿಂದಾಗಿ ದೇಶದ ಶ್ರೀಮಂತರು ಬೇರೆ ದೇಶಗಳಲ್ಲಿ ಮದುವೆಯಾಗುವ ಬದಲು ದೇಶದಲ್ಲಿಯೇ ಮದುವೆಯಾಗಲು ಆದ್ಯತೆ ನೀಡಬೇಕು. ಈಗಾಗಲೇ ಮದುವೆ ಸೀಸನ್‌ ಆರಂಭವಾಗಿದೆ. ಪ್ರತಿ ಮದುವೆ ಸೀಸನ್‌ನಲ್ಲೂ 5 ಲಕ್ಷ ಕೋಟಿ ರೂ. ವಹಿವಾಟು ಆಗುತ್ತದೆ. ಹಾಗಾಗಿ, ದೇಶದಲ್ಲಿ ಮದುವೆಯಾಗುವವರು ಕೂಡ ದೇಶೀಯ ವಸ್ತುಗಳನ್ನೇ ಬಳಸಬೇಕು. ಭಾರತದಲ್ಲಿ ತಯಾರಾದ ವಸ್ತುಗಳನ್ನು ಖರೀದಿಸಬೇಕು” ಎಂದು ನರೇಂದ್ರ ಮೋದಿ ಕರೆ ನೀಡಿದರು. ಕ್ರಿಕೆಟಿಗ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ, ರಣವೀರ್‌ ಸಿಂಗ್-ದೀಪಿಕಾ ಪಡುಕೋಣೆ ಸೇರಿ ಹಲವು ಸೆಲೆಬ್ರಿಟಿಗಳು ವಿದೇಶದಲ್ಲಿಯೇ ಮದುವೆಯಾಗಿದ್ದಾರೆ.

ಮುಂಬೈ ದಾಳಿ ಹುತಾತ್ಮರಿಗೆ ನಮನ

ಇದನ್ನೂ ಓದಿ: ಮನ್‌ ಕೀ ಬಾತ್‌ನಲ್ಲಿ ಚಾಮರಾಜನಗರದ ವರ್ಷಾ ಎಂಬ ಮಹಿಳೆಯ ನೆನೆದ ಮೋದಿ; ಏನಿವರ ಸಾಧನೆ?

2008ರ ನವೆಂಬರ್‌ 26ರಂದು ಮುಂಬೈ ಮೇಲೆ ನಡೆದ ಉಗ್ರರ ದಾಳಿ ಕುರಿತು ಮಾತನಾಡಿದ ನರೇಂದ್ರ ಮೋದಿ, ದಾಳಿ ವೇಳೆ ಹುತಾತ್ಮರಾದ ಯೋಧರು, ಭದ್ರತಾ ಸಿಬ್ಬಂದಿಗೆ ನಮನ ಸಲ್ಲಿಸಿದರು. “ನವೆಂಬರ್‌ 26ರಂದು ನಡೆದ ಉಗ್ರರ ದಾಳಿಯನ್ನು ದೇಶವು ಎಂದಿಗೂ ಮರೆಯುವುದಿಲ್ಲ. ಇದು ದೇಶದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾಗಿದೆ. ದಾಳಿಯ ವೇಳೆ ಮಡಿದ ಯೋಧರಿಗೆ ನನ್ನ ನಮನಗಳು. ಇಂತಹ ಘಟನೆಗಳು ದೇಶದಲ್ಲಿ ಎಂದಿಗೂ ಘಟಿಸದಿರಲಿ” ಎಂದು ಹೇಳಿದರು. ಹಾಗೆಯೇ, ನವೆಂಬರ್‌ 26ರಂದು ಸಂವಿಧಾನ ದಿನ ಆಚರಿಸುವ ಕಾರಣ, ಸಂವಿಧಾನದ ಮಹತ್ವ, ರಚನೆ, ಸಂವಿಧಾನ ರಚನೆಗೆ ಮಹನೀಯರ ಕೊಡುಗೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version