Site icon Vistara News

ಯೋಗಿ ಬುಲ್ಡೋಜರ್‌ಗೆ ತಡೆ ನೀಡದ ಸುಪ್ರೀಂಕೋರ್ಟ್‌, ಕಾನೂನು ಮೀರದಿರಲಿ ಎಂದು ಎಚ್ಚರಿಕೆ

Buldozer

ನವ ದೆಹಲಿ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಅದರೆ, ಬುಲ್ಡೋಜರ್‌ ಕಾರ್ಯಾಚರಣೆಗಳು ಕಾನೂನಿನ ಚೌಕಟ್ಟನ್ನು ಮೀರದಿರಲಿ ಎಂದು ಎಚ್ಚರಿಕೆ ನೀಡಿದೆ. ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದ ವಿಸ್ತೃತ ಅಫಿಡವಿಟ್‌ನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಜೂನ್‌ ೨೧ಕ್ಕೆ ನಿಗದಿ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಟ್ಟಡಗಳ ಧ್ವಂಸ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರಕಾರ ಒಂದೇ ಸಮುದಾಯ ಮತ್ತು ಅದರ ಸದಸ್ಯರನ್ನು ಗುರಿ ಮಾಡುತ್ತಿದೆ. ಮನೆ, ಕಟ್ಟಡ ಧ್ವಂಸಕ್ಕೆ ಮೊದಲು ನೋಟಿಸ್‌ಗಳನ್ನು ಕೂಡಾ ನೀಡಲಾಗುತ್ತಿಲ್ಲ. ಹೀಗಾಗಿ ಇಂಥ ಅಕ್ರಮ ಕಾರ್ಯಾಚರಣೆಗಳಿಗೆ ತಡೆಯೊಡ್ಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ದಾವೆ ಸಲ್ಲಿಸಲಾಗಿತ್ತು.

ಸೂಕ್ತವಾದ ಕಾರ್ಯವಿಧಾನಗಳನ್ನು ಅನುಸರಿಸದೆ ಕಟ್ಟಡಗಳನ್ನು ಒಡೆಯಬಾರದು ಎಂದು ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಜಮಾಯತ್‌ ಉಲಾಮಾ ಇ ಹಿಂದ್‌ ಎಂಬ ಸಂಘಟನೆ ಮನವಿ ಮಾಡಿತ್ತು.

ಸರಕಾರ ಏನು ಹೇಳಿತು?
ಬುಲ್ಡೋಜರ್‌ ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಕಾನೂನನ್ನು ಉಲ್ಲಂಘಿಸಲಾಗಿಲ್ಲ. ಯಾವುದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮನೆ, ಕಟ್ಟಡಗಳನ್ನು ಒಡೆದು ಹಾಕಲಾಗಿಲ್ಲ ಎಂದು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರದ ಪರ ವಕೀಲರು ಸುಪ್ರೀಂಕೋರ್ಟ್‌ ಮುಂದೆ ನಿವೇದಿಸಿಕೊಂಡರು. ಯಾವುದೇ ನೋಟಿಸ್‌ ನೀಡದೆ ಬುಲ್ಡೋಜರ್‌ ಹರಿಸಲಾಗಿದೆ ಎಂಬ ಆಪಾದನೆಗಳನ್ನು ಸರಕಾರ ನಿರಾಕರಿಸಿತು.

ಸುಪ್ರೀಂಕೋರ್ಟ್‌ ಹೇಳಿದ್ದೇನು?
ʻʻಕಾರ್ಯಾಚರಣೆಯನ್ನು ಈಗಲೇ ನಿಲ್ಲಿಸಿ ಎಂದು ನಾವು ಹೇಳುವುದಿಲ್ಲ. ಆದರೆ, ಎಲ್ಲಾ ಕಾರ್ಯಾಚರಣೆಗಳು ಕಾನೂನಿನ ಚೌಕಟ್ಟಿನೊಳಗೇ ಇರುವಂತೆ ನೋಡಿಕೊಳ್ಳಿʼ ಎಂದು ಸುಪ್ರೀಂಕೋರ್ಟ್‌ ಉತ್ತರ ಪ್ರದೇಶ ಸರಕಾರದ ಪರ ವಕೀಲರಿಗೆ ಹೇಳಿತು.
ʻಸರಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶವಿದೆ. ನಾವು ಅರ್ಜಿದಾರರ ಸುರಕ್ಷತೆಯನ್ನೂ ಕಾಯ್ದುಕೊಳ್ಳಬೇಕಾಗುತ್ತದೆ. ಅವರು ಕೂಡಾ ಸಮಾಜದ ಒಂದು ಭಾಗವೆ. ಯಾರಿಗಾದರೂ ಅಹವಾಲು ಇದ್ದರೆ ಅದನ್ನು ಸರಿಪಡಿಸಿಕೊಳ್ಳುವ ಹಕ್ಕು ಅವರಿಗೆ ಇರುತ್ತದೆ. ಇಂಥ ಧ್ವಂಸ ಕಾರ್ಯಾಚರಣೆಗಳು ಕಾನೂನಿನ ಪ್ರಕಾರವೇ ನಡೆಯಬೇಕು. ನಾವು ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಸುತ್ತೇವೆʼ ಎಂದು ಸುಪ್ರೀಂಕೋರ್ಟ್‌ ಹೇಳಿತು.

ಸರಕಾರ ಸಲ್ಲಿಸುವ ಅಫಿಡವಿಟ್‌ನಲ್ಲಿ ಧ್ವಂಸಗೊಳಿಸಿದ ಕಟ್ಟಡಗಳಿಗೆ ಸಂಬಂಧಿಸಿ ನೀಡಲಾದ ನೋಟಿಸ್‌ ಮತ್ತಿತರ ವಿವರಗಳನ್ನು ಒದಗಿಸಬೇಕು ಎಂದು ಕೋರ್ಟ್‌ ತಿಳಿಸಿದೆ.

ಉತ್ತರ ಪ್ರದೇಶದ ಯೋಗಿ ಸರಕಾರವು ಸಮಾಜವಿರೋಧಿ ಚಟುವಟಿಕೆಗಳು, ಗಲಾಟೆ, ದೊಂಬಿಗಳಲ್ಲಿ ಶಾಮೀಲಾದ ಆರೋಪಿಗಳಿಗೆ ಸೇರಿದ ಕಟ್ಟಡಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಯಾಗ್ ರಾಜ್‌ನಲ್ಲಿ ನಡೆದ ದೊಂಬಿಯ ಸೂತ್ರಧಾರ ಜಾವೇದ್‌ ಅಹಮದ್‌ನ ಮನೆಯನ್ನು ಕೆಡವಿ ಹಾಕಲಾಗಿತ್ತು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ ಅವರನ್ನು ʼಬುಲ್ಡೋಜರ್‌ ಬಾಬಾʼ ಎಂದೇ ಬಿಂಬಿಸಲಾಗಿತ್ತು.

ಇದನ್ನೂ ಓದಿ| ಪ್ರವಾದಿ ಅವಹೇಳನ ವಿವಾದ: ಪ್ರಯಾಗರಾಜ್‌ ಹಿಂಸಾಚಾರ ಆರೋಪಿ ಮನೆಗೆ ಬುಲ್ಡೋಜರ್‌!

Exit mobile version