ನವದೆಹಲಿ: ”ಜಡ್ಜ್‌ಗಳ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಯು (Judges Appointement) ಸಂವಿಧಾನಕ್ಕೆ ಹೊಂದಾಣಿಕೆಯಾಗುವುದಿಲ್ಲ,” ಎಂಬ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರ ಹೇಳಿಕೆಯ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ”ಕೇಂದ್ರ ಸಚಿವರ ಹೇಳಿಕೆಯು ಸ್ವೀಕಾರಾರ್ಹವಲ್ಲ” ಎಂದಿರುವ ನ್ಯಾಯಾಲಯವು, ”ಈ ರೀತಿಯದ್ದಾಗಬಾರದಿತ್ತು,” ಎಂದು ಹೇಳಿದೆ.
ಜಸ್ಟೀಸ್ ಎಸ್ ಕೆ ಕೌಲ್ ನೇತೃತ್ವದ ಪೀಠವು, ಶಿಫಾರಸು ಮಾಡಲಾದ ಹೆಸರುಗಳನ್ನು (ನ್ಯಾಯಾಂಗ ನೇಮಕಾತಿಗಳು) ಕ್ಲಿಯರ್ ಮಾಡುತ್ತಿಲ್ಲ. ಹೀಗಾದರೆ ವ್ಯವಸ್ಥೆ ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಪ್ರಶ್ನಿಸಿತು.
ಎನ್‌ಜೆಎಸಿ(ನ್ಯಾಷನಲ್ ಜುಡಿಷಿಯಲ್ ಅಪಾಯಿಂಟ್‌ಮೆಂಟ್ಸ್ ಕಮಿಷನ್) ಸಂವಿಧಾನಬದ್ಧವಾಗಿ ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಸರ್ಕಾರವು ಅಸಮಾಧಾನ ಹೊಂದಿರುವಂತೆ ಕಾಣುತ್ತಿದೆ! ಆದರೆ, ಪರಿಸ್ಥಿತಿ ಹಾಗಿಲ್ಲ. ಆಯೋಗ ಶಿಫಾರಸು ಮಾಡಿದ ಹೆಸರಗಳನ್ನು ಇಷ್ಟು ದೀರ್ಘ ಅವಧಿಗೆ ಹಿಡಿದಿಟ್ಟುಕೊಳ್ಳುವಂತಿಲ್ಲ ಎಂದು ಪೀಠ ಹೇಳಿದೆ.
ಅಟಾರ್ನಿ ಜನರಲ್ ಅವರು, ”ಕೆಲವೊಮ್ಮೆ ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತವೆ” ಎಂದು ಕೇಂದ್ರವನ್ನು ಸಮರ್ಥಿಸಿಕೊಂಡರು. ಆಗ, ಪೀಠವು, ”ಮಿಸ್ಟರ್ ಅಟಾರ್ನಿ ಜನರಲ್, ನಾವು ಮಾಧ್ಯಮಗಳ ವರದಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ, ಇದು ಅತ್ಯಂತ ಉನ್ನತ ಸ್ಥಾನದಲ್ಲಿರುವರಿಂದ ಸಂದರ್ಶನದಲ್ಲಿ ಬಂದ ಆರೋಪವಾಗಿದೆ,” ಎಂದು ನ್ಯಾಯಮೂರ್ತಿಗಳು ಹೇಳಿದರು.
”ಕೆಲವೊಮ್ಮೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರಗಳ ಪಟ್ಟಿಯಿಂದ ನೀವು(ಸರ್ಕಾರ) ಕೆಲವೊಂದನ್ನು ಮಾತ್ರ ಆಯ್ಕೆ ಮಾಡುತ್ತೀರಿ. ಉಳಿದವರನ್ನು ಆಯ್ಕೆ ಮಾಡುವುದಿಲ್ಲ. ನೀವೇನು ಮಾಡುತ್ತೀದ್ದೀರಿ ಅದು ಹಿರಿತನಕ್ಕೆ ಧಕ್ಕೆ ತರುತ್ತಿದೆ. ಕೊಲಿಜಿಯಂ ನಿರ್ಧಾರ ಕೈಗೊಂಡಾಗ, ಅದು ಹಿರಿತನವೂ ಸೇರಿದಂತೆ ಅನೇಕ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಕೇಂದ್ರ ಸರ್ಕಾರದಿಂದಲೂ ಮಾಹಿತಿಯನ್ನು ಪಡೆದುಕೊಂಡಿರುತ್ತದೆ,” ಎಂದು ಜಸ್ಟೀಸ್ ಕೌಲ್ ಅವರು ಅಟಾರ್ನಿ ಜನರಲ್ ಅವರಿಗೆ ತಿಳಿಸಿದರು.
ಇದನ್ನೂ ಓದಿ | Wilful Disobedience | ಜಡ್ಜ್‌ಗಳ ನೇಮಕಾತಿ ವಿಳಂಬ, ಕೇಂದ್ರದ ವಿರುದ್ಧ ಸುಪ್ರೀಂ ಅಸಮಾಧಾನ