ನವದೆಹಲಿ: ಆರೋಪಿಯು ತಪ್ಪಿತಸ್ಥನೆಂದು ಸಾಬೀತಾಗದೇ ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಟ್ಟುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಲಖೀಂಪುರ ಖೇರಿ ಹಿಂಸಾಚಾರದ (Lakhimpur Kheri violence) ಪ್ರಮುಖ ಆರೋಪಿಯಾಗಿರುವ, ಕೇಂದ್ರ ಸಚಿವ ಅಜಯಕುಮಾರ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಖೀಂಪುರ ಖೇರಿ ಹಿಂಸಾಚಾರದ ನಿಜವಾದ ಬಲಿಪಶುಗಳಾಗಿರುವ ರೈತರು ಜೈಲಿನಲ್ಲಿದ್ದಾರೆ. ಒಂದು ವೇಳೆ, ಆಶೀಷ್ ಮಿಶ್ರಾ ಅವರಿಗೆ ನಾವು ಜಾಮೀನು ನೀಡದಿದ್ದರೆ ಅವರು ಜೈಲಿನಲ್ಲೇ ಉಳಿಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯವು ಜಾಮೀನು ನಿರಾಕರಣೆ ಮಾಡಿದೆ.
ಜಸ್ಟೀಸ್ ಸೂರ್ಯಕಾಂತ್ ಮತ್ತು ಜಸ್ಟೀಸ್ ಜೆ ಕೆ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠವು, ಲಖೀಂಪುರ ಖೇರಿ ಹಿಂಸಾಚಾರದ ಆರೋಪಿ ಆಶೀಷ್ ಮಿಶ್ರಾ ಜಾಮೀನು ಅರ್ಜಿ ವಿಚಾರಣೆ ನಡೆಸಿ, ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇದಕ್ಕೂ ಮೊದಲು ವಿಚಾರಣೆ ವೇಳೆ, ಉತ್ತರ ಪ್ರದೇಶ ಸರ್ಕಾರವು ಜಾಮೀನು ನೀಡುವುದನ್ನು ವಿರೋಧಿಸಿತ್ತು.
2021 ಅಕ್ಟೋಬರ್ 3ರಂದು ಲಖೀಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಎಸ್‌ಯುವಿ ಹರಿಸಲಾಗಿತ್ತು. ಈ ಎಸ್‌ಯುವಿಯನ್ನು ಆರೋಪಿ ಆಶೀಷ್ ಮಿಶ್ರಾ ಚಲಾಯಿಸುತ್ತಿದ್ದರು. ಈ ಘಟನೆಯಲ್ಲಿ ನಾಲ್ವರು ರೈತರು ಮೃತರಾಗಿದ್ದರು. ಅಲ್ಲದೇ, ರೊಚ್ಚಿಗೆದ್ದ ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕನನ್ನು ಹೊಡೆದು ಸಾಯಿಸಿದ್ದರು. ಈ ಘಟನೆಯಲ್ಲಿ ಒಬ್ಬ ಪತ್ರಕರ್ತ ಕೂಡ ಮೃತಪಟ್ಟಿದ್ದರು.
ಇದನ್ನೂ ಓದಿ | Farmers Protest | ರೈತರ ಮಹಾಪಂಚಾಯತ್ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಭಾರಿ ಭದ್ರತೆ, ಕೆಲವು ಕಡೆ ಉದ್ವಿಗ್ನ ಸ್ಥಿತಿ