ನವದೆಹಲಿ: ಕೇಂದ್ರ ಸರ್ಕಾರವು ೨೦೧೬ರ ನವೆಂಬರ್ ೮ರಂದು ದೇಶದಲ್ಲಿ ಐನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರದ (Demonetisation) ಕುರಿತು ಮುಚ್ಚಿದ ಲಕೋಟೆಯಲ್ಲಿ ಲಿಖಿತ ಮಾಹಿತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ನೋಟು ನಿಷೇಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ೫೮ ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ತೀರ್ಪನ್ನು ಕಾಯ್ದಿರಿಸಿತು. ಹಾಗೆಯೇ, ನೋಟು ಅಮಾನ್ಯೀಕರಣದ ನಿರ್ಧಾರ ತೆಗೆದುಕೊಂಡಿರುವುದು, ತೀರ್ಮಾನದ ಕುರಿತು ಬಹಿರಂಗಪಡಿಸಲಾಗದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಡಿಸೆಂಬರ್ ೧೦ರೊಳಗೆ ಲಿಖಿತವಾಗಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.
ದೇಶದಲ್ಲಿ ಕಪ್ಪು ಹಣವನ್ನು ನಿಯಂತ್ರಿಸುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೧೬ರ ನವೆಂಬರ್ ೮ರಂದು ಐನೂರು, ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿದಾರರ ಪರ ಕೇಂದ್ರದ ಮಾಜಿ ಸಚಿವರೂ ಆದ ಹಿರಿಯ ವಕೀಲ ಪಿ.ಚಿದಂಬರಂ, ಶ್ಯಾಮ್ ದಿವಾನ್ ಸೇರಿ ಹಲವರು ವಾದ ಮಂಡಿಸಿದರು. ಕೇವಲ ಒಂದು ಗಂಟೆಯಲ್ಲಿಯೇ ನೋಟು ನಿಷೇಧದ ಕ್ರಮ ತೆಗೆದುಕೊಳ್ಳಲಾಗಿದೆ. ಕೇಂದ್ರದ ನಿರ್ಧಾರಕ್ಕೆ ಆರ್‌ಬಿಐ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದೆ ಎಂಬುದು ವಕೀಲರ ವಾದವಾಗಿದೆ.
ಇದನ್ನೂ ಓದಿ | Demonetisation | ಕಪ್ಪುಹಣ ನಿರ್ಮೂಲನೆಯ ಭಾಗವಾಗಿ ನೋಟು ಬ್ಯಾನ್ : ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸಮರ್ಥನೆ