ಹೊಸದಿಲ್ಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ವಿಡಿಯೊಗ್ರಫಿ ಸರ್ವೆ ವೇಳೆ ಕಂಡಿದೆ ಎನ್ನಲಾದ ಶಿವಲಿಂಗಕ್ಕೆ ಸಂಪೂರ್ಣ ರಕ್ಷಣೆ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ಅದೇ ವೇಳೆ, ಮುಸ್ಲಿಮರು ಮಸೀದಿಗೆ ಪ್ರಾರ್ಥನೆಗೆ ಬರುವ ದಾರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಂಗಳವಾರ ನಡೆದ ಮಹತ್ವದ ವಿಚಾರಣೆ ವೇಳೆ ಈ ವಿಚಾರವನ್ನು ಪ್ರಕಟಿಸಿತು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ವಿಡಿಯೊಗ್ರಫಿ ಸರ್ವೆ ನಡೆಸಬೇಕು ಎಂಬ ಸ್ಥಳೀಯ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಆದರೆ, ಆದೇಶಕ್ಕೆ ತಡೆ ನೀಡಲು ಒಪ್ಪದ ಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು. ಈ ನಡುವೆ, ಮೂರು ದಿನಗಳ ಸರ್ವೆ ಮುಗಿದು ಶಿವಲಿಂಗ ಪತ್ತೆಯ ಹೊಸ ಸಂಗತಿ ಎದ್ದು ಬಂದಿತ್ತು. ಹೀಗಾಗಿ ವಿಚಾರಣೆ ಹೊಸ ವಿಚಾರಗಳಿಗೆ ತಿರುಗಿತು.
ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಪಿ.ಎಸ್. ನರಸಿಂಹ ಅವರಿರುವ ಪೀಠದ ಎದುರು ಜ್ಞಾನವಾಪಿ ಮಸೀದಿ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಹುಜೇಫಾ ಅಹಮದಿ ಅವರು ಆವರಣವನ್ನು ಸೀಲ್ ಮಾಡುವುದು ಸರಿಯಲ್ಲ, ಸೀಲ್ ಮಾಡಬೇಕು ಎಂಬ ಕೋರ್ಟ್ ಆದೇಶ ಅಕ್ರಮ ಎಂದು ಹೇಳಿದರು. ʻʻಒಂದೊಮ್ಮೆ ಮಸೀದಿ ಆವರಣವನ್ನು ಮುಚ್ಚಿದರೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂಬ ಸೂಚನೆಯ ಉಲ್ಲಂಘನೆಯಾಗುತ್ತದೆ. ಜತೆಗೆ ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ ಮೂರರ ಪ್ರಕಾರ ಹೀಗೆ ಮಾಡುವಂತಿಲ್ಲ,ʼʼ ಎಂದು ವಾದಿಸಿದರು.
ವಾರಾಣಸಿ ಜಿಲ್ಲಾಡಳಿತವು ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಯಾರೂ ಪ್ರವೇಶಿಸದಂತೆ ಮುಚ್ಚಲು ನೀಡಿದ ಆದೇಶದಲ್ಲಿ ಮುಸ್ಲಿಮರು ಕೈಕಾಲು ತೊಳೆಯುವ ವಾಜುಖಾನಾ ಪ್ರದೇಶಕ್ಕೆ ಹೋಗುವ ಜಾಗವನ್ನೂ ಬಂದ್ ಮಾಡಿದೆ. ಕೇವಲ 20 ಮಂದಿಗಷ್ಟೇ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ ಎಂದರು.
ಇದೀಗ ಸುಪ್ರೀಂಕೋರ್ಟ್ ಶಿವಲಿಂಗದ ರಕ್ಷಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ, ಆದರೆ ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡುವುದಾಗಿ ಹೇಳಿದೆ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.