Site icon Vistara News

ಅಫ್ಜಲ್ ಅನ್ಸಾರಿ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್‌; ಲೋಕಸಭೆಗೆ ಎಂಟ್ರಿ

afzal ansari

ಲಖನೌ: 2007 ರ ಗ್ಯಾಂಗ್‌ಸ್ಟರ್ ಆಕ್ಟ್ ಪ್ರಕರಣದಲ್ಲಿ ಅನರ್ಹಗೊಂಡ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ(Afzal Ansari) ಅವರ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್(Supreme Court) ಗುರುವಾರ ಅಮಾನತುಗೊಳಿಸಿದೆ. ಇದರಿಂದ ಅವರು ಸದನಕ್ಕೆ ಬರಹುದಾಗಿದೆ. ಆದರೆ ಕಲಾಪದಲ್ಲಿ ಯಾವುದೇ ಮತ ಚಲಾಯಿಸಲು ಅಥವಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಷರತ್ತನ್ನು ವಿಧಿಸಿ ಶಾಸಕರಾಗಿ ಅವರ ಸ್ಥಾನಮಾನವನ್ನು ಮತ್ತೆ ನೀಡಲಾಗಿದೆ.

ಉತ್ತರ ಪ್ರದೇಶದ ಘಾಜಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಹುಜನ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್​ ಅನ್ಸಾರಿಗೆ ಇದೇ ವರ್ಷ ಏಪ್ರಿಲ್​ 29ರಂದು ಉತ್ತರ ಪ್ರದೇಶದ ಗಾಜಿಪುರದ ವಿಶೇಷ ನ್ಯಾಯಾಲಯವು ಅನ್ಸಾರಿ ಮತ್ತು ಅವರ ಸಹೋದರ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರನ್ನು ದೋಷಿಗಳೆಂದು ಘೋಷಿಸಿತು. ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತು. ಅನ್ಸಾರಿಗೆ ಗೂಂಡಾ ಕಾಯ್ದೆಯಡಿ 4ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

1996ರಲ್ಲಿ ನಡೆದಿದ್ದ ವಿಶ್ವ ಹಿಂದು ಪರಿಷದ್​ ಪದಾಧಿಕಾರಿ ನಂದಕಿಶೋರ್​ ರೌಂಗ್ಟಾ ಅಪಹರಣ ಮತ್ತು ಕೊಲೆ ಪ್ರಕರಣ ಮತ್ತು 2005ರ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಅಪಹರಣ ಮತ್ತು ಹತ್ಯೆ ಕೇಸ್​​ನಲ್ಲಿ ಅಫ್ಜಲ್ ಅನ್ಸಾರಿ ಕೂಡ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋರ್ಟ್​ ಈ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ Mahua Moitra: ಲೋಕಸಭೆಯಿಂದ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ ಕದ ತಟ್ಟಿದ ಮಹುವಾ

ಇದೀಗ ಅನ್ಸಾರಿ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು 3:2 ಬಹುಮತದಿಂದ ಅನ್ಸಾರಿಯವರ ಮೇಲ್ಮನವಿಯನ್ನು ಅಂಗೀಕರಿಸಿತು. ಜೂನ್ 30 2024ರ ಗಡುವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಅಪರಾಧದ ವಿರುದ್ಧದ ಅವರ ಮನವಿಯನ್ನು ನಿರ್ಧರಿಸಲು ನಿಗದಿಪಡಿಸಿತು. ನ್ಯಾಯಮೂರ್ತಿಗಳಾದ ಕಾಂತ್ ಮತ್ತು ಭೂಯಾನ್ ಅವರು ಅನ್ಸಾರಿ ಅವರ ಮನವಿಯ ಪರವಾಗಿ ತೀರ್ಪು ನೀಡಿದರು.

ಕೃಷ್ಣಾನಂದ ರೈ ಅವರು 2002ರಿಂದ 2005ರವರೆಗೆ ಉತ್ತರ ಪ್ರದೇಶದ ಮವೂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 2005ರಲ್ಲಿ ಇವರ ಅಪಹರಣವಾಗಿ, ಹತ್ಯೆಯಾಗಿತ್ತು. ಗಾಝಿಯಾಬಾದ್​ನಲ್ಲಿರುವ ತಮ್ಮ ಹುಟ್ಟೂರಾದ ಗೊಂಡೌರ್​ ಹಳ್ಳಿಗೆ ತೆರಳುತ್ತಿದ್ದಾಗ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿ, ಹತ್ಯೆಗೈದಿದ್ದರು. ಈ ಹತ್ಯೆಯನ್ನು ಅನ್ಸಾರಿ ಸಹೋದರರೇ ಮಾಡಿಸಿದ್ದಕ್ಕೆ ಪುರಾವೆ ಸಿಕ್ಕಿತ್ತು. ನಂದಕಿಶೋರ್​ ಕೊಲೆಯಲ್ಲೂ ಇವರ ಕೈವಾಡ ಇದ್ದಿದ್ದು ಸಾಬೀತಾಗಿತ್ತು.

ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ?

ಪ್ರಜಾಪ್ರತಿನಿಧಿ ಕಾಯ್ದೆಯನ್ವಯ, ಯಾವುದೇ ಸಂಸದ, ಯಾವುದೇ ಆರೋಪದಡಿ 2ವರ್ಷಕ್ಕಿಂತಲೂ ಹೆಚ್ಚು ಅವಧಿಯ ಜೈಲು ಶಿಕ್ಷೆಗೆ ಗುರಿಯಾದರೆ, ಆತ ತನ್ನ ಲೋಕಸಭೆ ಸದಸ್ಯನ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. 4 ವರ್ಷಗಳ ಕಾಲ ಶಿಕ್ಷೆಯಾದ ಕಾರಣದಿಂದ ಅನ್ಸಾರಿ ಅವರು ಸಂಸದ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಕಾರಣ ಅವರಿಗೆ ತಮ್ಮ ಸಂಸದ ಸ್ಥಾನ ಮತ್ತೆ ಸಿಕ್ಕಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಅನ್ಸಾರಿ ಸ್ಪರ್ಧಿಸಬಹುದು ಎಂಬುದು ಬಹುಮತದ ಅಭಿಪ್ರಾಯ. ಈ ಚುನಾವಣೆಯ ಫಲಿತಾಂಶವು ಅವರ ಮೇಲ್ಮನವಿಯಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಅವಲಂಬಿಸಿರುತ್ತದೆ. ಸದ್ಯ ಸಂಸದ ಸ್ಥಾನ ಸಿಕ್ಕರೂ ಕೂಡ ಅವರಿಗೆ ಕಲಾಪದಲ್ಲಿ ಯಾವುದೇ ಮತ ಚಲಾಯಿಸಲು ಅಥವಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಕೇವಲ ಸದನಕ್ಕೆ ಹಾಜರ್​ ಆಗಬಹುದಷ್ಟೆ.

Exit mobile version