ನವದೆಹಲಿ: ಮುಸ್ಲಿಂ ಸಮುದಾಯದವರಲ್ಲಿ ಆಚರಣೆಯಲ್ಲಿರುವ ನಿಖಾ ಹಲಾಲ (Nikah Halala) (ತಲಾಖ್ ಪಡೆದುಕೊಂಡ ಮಹಿಳೆಯು ಮತ್ತೆ ಗಂಡನ ಜತೆ ಸಂಸಾರ ಮಾಡಲು ಬೇರೊಬ್ಬನನ್ನು ಮದುವೆಯಾಗಿ, ಆತನಿಗೆ ವಿಚ್ಛೇದನ ನೀಡುವ ಪದ್ಧತಿ) ಹಾಗೂ ಬಹುಪತ್ನಿತ್ವ ಪದ್ಧತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ (Supreme Court) ಐವರು ನ್ಯಾಯಮೂರ್ತಿಗಳ ಪೀಠ ರಚಿಸುವುದಾಗಿ ತಿಳಿಸಿದೆ.
ನಿಖಾ ಹಲಾಲ ಹಾಗೂ ಬಹುಪತ್ನಿತ್ವ ಪದ್ಧತಿ ಪ್ರಶ್ನಿಸಿ ಪಿಐಎಲ್ ಸಲ್ಲಿಸಿರುವ ವಕೀಲ ಅಶ್ವಿನಿ ಉಪಾಧ್ಯಾಯ, ಇದಕ್ಕೂ ಮೊದಲು ರಚಿಸಿದ ಸಾಂವಿಧಾನಿಕ ಪೀಠದ ನ್ಯಾ.ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ.ಹೇಮಂತ್ ಗುಪ್ತಾ ಅವರು ನಿವೃತ್ತರಾಗಿದ್ದಾರೆ. ಹಾಗಾಗಿ, ಅರ್ಜಿಗಳ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಪೀಠ ರಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಒಪ್ಪಿಗೆ ಸೂಚಿಸಿತು.
“ಸದ್ಯ ಐವರು ನ್ಯಾಯಮೂರ್ತಿಗಳ ಪೀಠದ ಬಳಿ ಹಲವು ಪ್ರಮುಖ ಪ್ರಕರಣಗಳಿವೆ. ಶೀಘ್ರದಲ್ಲಿಯೇ ನಿಖಾ ಹಲಾಲ ಹಾಗೂ ಬಹುಪತ್ನಿತ್ವ ಪದ್ಧತಿ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಪಂಚ ಸದಸ್ಯರ ಪೀಠ ರಚಿಸಲಾಗುವುದು” ಎಂದು ನ್ಯಾಯಪೀಠ ತಿಳಿಸಿತು. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಪದ್ಧತಿಯು ಒಬ್ಬ ವ್ಯಕ್ತಿ ನಾಲ್ವರನ್ನು ಮದುವೆಯಾಗಬಹುದಾಗಿದೆ. ನಿಖಾ ಹಲಾಲ ಪದ್ಧತಿಯು ಹೆಣ್ಣುಮಕ್ಕಳಿಗೆ ಮಾರಕವಾಗಿದೆ. ಹಾಗಾಗಿ, ಇವುಗಳನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ | Polygamist | 43 ವರ್ಷದಲ್ಲಿ 53 ಮದುವೆ, ಇದು ಸೌದಿ ವ್ಯಕ್ತಿಯ ಶಾದಿ ಕತೆ