Site icon Vistara News

ಸಚಿವನ ಸ್ವಾಗತಕ್ಕೆ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತ ಶಾಲಾ ಮಕ್ಕಳು; ನಿಮ್ಮ ಶೋಕಿ ಜಾಸ್ತಿಯಾಯ್ತು ಎಂದ ನೆಟ್ಟಿಗರು

NCP Minister Anil Patil And School Children in road

ಮಹಾರಾಷ್ಟ್ರದಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕಾರ (Maharashtra Politics) ಮಾಡಿದ ಎನ್​ಸಿಪಿ ಸಚಿವನನ್ನು (NCP Minister) ಸ್ವಾಗತಿಸುವ ಸಲುವಾಗಿ ಶಾಲಾ ಮಕ್ಕಳನ್ನು ರಸ್ತೆಯ ಎರಡೂ ಬದಿಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಹರಿದಾಡುತ್ತಿದೆ. ಹೀಗೆ ರಸ್ತೆ ಬದಿಯಲ್ಲಿ ನಿಂತ ಮಕ್ಕಳು, ಸಚಿವರು ಬರುತ್ತಿದ್ದಂತೆ ಸೆಲ್ಯೂಟ್ ಹೊಡೆಯುವುದನ್ನು ವಿಡಿಯೊದಲ್ಲಿ ನೋಡಬಹುದು.

ಇತ್ತೀಚೆಗೆ ಎನ್​ಸಿಪಿ ನಾಯಕ ಅಜಿತ್ ಪವಾರ್ ಅವರು ಪಕ್ಷದಿಂದ ಎಂಟು ಮಂದಿ ಶಾಸಕರೊಂದಿಗೆ ಬಂಡಾಯವೆದ್ದು ಹೋಗಿ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಮೈತ್ರಿ ಸರ್ಕಾರವನ್ನು ಸೇರಿಕೊಂಡು ಉಪಮುಖ್ಯಮಂತ್ರಿಯಾಗಿದ್ದಾರೆ. ಹಾಗೇ, ಇವರೊಂದಿಗೆ ಹೋದ ಎಂಟೂ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹೀಗೆ ಸಚಿವರಾದವರಲ್ಲಿ ಅನಿಲ್ ಪಾಟೀಲ್ ಕೂಡ ಒಬ್ಬರು. ಈ ಅನಿಲ್ ಪಾಟೀಲ್ ಅವರು ಸಚಿವರಾದ ಮೇಲೆ ಮೊದಲ ಬಾರಿಗೆ ಜಲಗಾಂವ್​ ಜಿಲ್ಲೆಯ ಅಮಾಲ್​ನೇರ್​ಗೆ ಭೇಟಿ ಕೊಡುವವರು ಇದ್ದರು. ಈ ವೇಳೆ ಅವರ ಸ್ವಾಗತಕ್ಕಾಗಿ ಅಲ್ಲಿನ ಆಶ್ರಮ ಶಾಲೆಯ ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದೆ. ಒಂದು ಬದಿಯಲ್ಲಿ ಗಂಡು ಮಕ್ಕಳು, ಇನ್ನೊಂದು ಬದಿಯಲ್ಲಿ ಹೆಣ್ಣುಮಕ್ಕಳನ್ನು ನಿಲ್ಲಿಸಲಾಗಿತ್ತು.

ಆಶ್ರಮ ಶಾಲೆಗಳು ಎಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮಕ್ಕಳಿಗಾಗಿ ಇರುವ ಶಾಲೆಗಳು. ಈ ಶಾಲೆಗಳಲ್ಲಿ ಓದುತ್ತಿರುವವರು ಬಡಮಕ್ಕಳೇ ಆಗಿರುತ್ತಾರೆ. ಇದೀಗ ಎನ್​ಸಿಪಿ ಸಚಿವನ ಸ್ವಾಗತಕ್ಕೆ ಅಮಾಲ್​ನೇರ್​​ನಲ್ಲಿರುವ ಆಶ್ರಮ ಶಾಲೆಯ ಮಕ್ಕಳನ್ನು ಸಾಲುಗಟ್ಟಿ ನಿಲ್ಲಿಸಲಾಗಿತ್ತು. ಆ ಮಕ್ಕಳು ಸಚಿವರಿಗಾಗಿ ಕಾದು ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದನ್ನು ನೋಡಬಹುದು. ಹಾಗೇ, ಕೆಲವರ ಕಾಲಲ್ಲಿ ಚಪ್ಪಲಿಯೂ ಇರಲಿಲ್ಲ. ಸಚಿವರು ತಮ್ಮ ಬೆಂಗಾವಲು ವಾಹನದೊಂದಿಗೆ ಬಂದು, ಇಳಿಯುತ್ತಿದ್ದಂತೆ ಮಕ್ಕಳೆಲ್ಲ ಎದ್ದು ನಿಂತು ಸೆಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಾಗೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸಚಿವನ ಸ್ವಾಗತಕ್ಕೆ ಶಾಲಾ ಮಕ್ಕಳು ಬೇಕಾ? ಅವರನ್ನು ಹೀಗೆ ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾ? ನಿಮ್ಮ ರಾಜಕೀಯಕ್ಕೆ ಕಲಿಯುವ ಮಕ್ಕಳನ್ನೇಕೆ ಬಳಸಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಹಾಗೇ, ಶೋಕಿ ಜಾಸ್ತಿಯಾಯ್ತು ಎಂದೂ ಬೈಯ್ಯುತ್ತಿದ್ದಾರೆ.

ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಮುಂಬಯಿಯಿಂದ ಅಮಾಲ್​ನೇರ್​ ಸುಮಾರು 350 ಕಿಮೀ ದೂರದಲ್ಲಿ ಇದೆ. ಅಲ್ಲಿ ಹೀಗೆ ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಆದರೆ ಯಾರೂ ದೂರು ಕೊಟ್ಟಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Congress Party: ಯುವ ನಾಯಕ ಕನ್ಹಯ್ಯ ಕುಮಾರ್‌ಗೆ ಎನ್‌ಎಸ್‌ಯುಐ ಉಸ್ತುವಾರಿ ಹೊಣೆ ನೀಡಿದ ಕಾಂಗ್ರೆಸ್

Exit mobile version