ಪಟನಾ: ಬಿಹಾರದ ಬೇಗುಸರಾಯ್ನಲ್ಲಿ ನರ್ಸರಿ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಾಲಾ ವ್ಯಾನ್ ಚಾಲಕ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಳಿಕ ಉದ್ವಿಗ್ನಗೊಂಡ ಗ್ರಾಮಸ್ಥರು ಚಾಲಕನನ್ನು ಹಿಡಿದು ಥಳಿಸಿ ವ್ಯಾನ್ಗೆ ಬೆಂಕಿ ಹಂಚಿ ಸುಟ್ಟು ಹಾಕಿದ್ದಾರೆ.
ಮಂಗಳವಾರ ಸಂಜೆ ಶಾಲೆ ಮುಗಿಸಿ ವಿದ್ಯಾರ್ಥಿಗಳನ್ನು ಮನೆಗೆ ಡ್ರಾಪ್ ಮಾಡುವ ವೇಳೆ ಚಾಲಕ ಈ ಕುಕೃತ್ಯ ಎಸಗಿದ್ದಾನೆ. ವ್ಯಾನ್ ನಲ್ಲಿ ಇಬ್ಬರು ನರ್ಸರಿ ವಿದ್ಯಾರ್ಥಿಗಳು ಮಾತ್ರ ಉಳಿದಿದ್ದಾಗ, ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳು ಮನೆಗೆ ತಲುಪಿದ ನಂತರ, ಕುಟುಂಬ ಸದಸ್ಯರು ಗ್ರಾಮಸ್ಥರ ಸಹಾಯದಿಂದ ಚಾಲಕನನ್ನು ಥಳಿಸಿ ಶಾಲಾ ವ್ಯಾನ್ ಗೆ ಬೆಂಕಿ ಹಚ್ಚಿದ್ದಾರೆ.
ಆರೋಪಿ ಚಾಲಕನನ್ನು ಬಂಧಿಸಲಾಗಿದ್ದು, ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಪುರಾವೆಗಳನ್ನು ಸಂಗ್ರಹಿಸಲು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಕ್ಕಳಿಗೆ ಬೇಗುಸರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಕಳೆದ ಮೂರು ವರ್ಷಗಳಿಂದ ಖಾಸಗಿ ಶಾಲೆಯ ವ್ಯಾನ್ ಓಡಿಸುತ್ತಿದ್ದ ಎನ್ನಲಾಗಿದೆ.
ಘಟನೆಯ ಬಗ್ಗೆ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರಲ್ಲಿ ಆಕ್ರೋಶವಿದೆ ಮತ್ತು ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಬೆಗುಸರಾಯ್ ಡಿಎಸ್ಪಿ ಅಮಿತ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : Escape Drama : ಮಕ್ಕಳನ್ನು ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಾಟಕ ಆಡಿದ ಮಹಿಳೆ!
142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್ ವಜಾ, ಮಕ್ಕಳ ಹೋರಾಟ ಯಶಸ್ವಿ
ಪಾಪಿ ಪ್ರಿನ್ಸಿಪಾಲ್ (principal) ವಿರುದ್ಧ ವಿದ್ಯಾರ್ಥಿನಿಯರ ಹೋರಾಟ ಯಶಸ್ವಿಯಾಗಿದೆ. 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (physical abuse, sexual harassment) ನೀಡಿದ ಕಿರಾತಕ ಪ್ರಾಂಶುಪಾಲನಿಗೆ ಕೆಲಸದಿಂದ ಗೇಟ್‌ಪಾಸ್ ನೀಡಲಾಗಿದೆ. ಈತನನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಬಾಲಕಿಯರ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲ ಕರ್ತಾರ್ ಸಿಂಗ್ ಈ ಕೃತ್ಯ ಎಸಗಿದವನು. ಈತನನ್ನು ಸರ್ಕಾರ ಮಂಗಳವಾರ ಸೇವೆಯಿಂದ ವಜಾಗೊಳಿಸಿದೆ. ನವೆಂಬರ್ 4ರಂದು ಪೊಲೀಸರು ಆರೋಪಿ ಕರ್ತಾರ್ ಸಿಂಗ್‌ನನ್ನು ಬಂಧಿಸಿದ್ದು, ಅವನೀಗ ಜಿಂದ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನ ಕೃತ್ಯಗಳ ಬಗ್ಗೆ ವಿದ್ಯಾರ್ಥಿನಿಯರೇ ಮೊದಲು ಸಂಘಟಿತರಾಗಿ ಹೋರಾಟಕ್ಕಿಳಿದು ಪೊಲೀಸರ, ರಾಷ್ಟ್ರಪತಿಗಳ ಗಮನಕ್ಕೆ ತಂದಿದ್ದರು.
ಉಚ್ಚಾನಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗುಲ್ಜಾರ್ ಮಲಿಕ್ ನೇತೃತ್ವದ ಸಮಿತಿಯ ತನಿಖಾ ವರದಿಯ ಮೇಲೆ ಕಾರ್ಯನಿರ್ವಹಿಸಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ತಪ್ಪಿತಸ್ಥನೆಂದು ಕಂಡುಬಂದಿರುವುದರಿಂದ, ಆತನನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ್ದಾರೆ.
ಸಂವಿಧಾನದ 311 (2) (ಬಿ) ಅಡಿಯಲ್ಲಿ ವಜಾ ಆದೇಶ ನೀಡಲಾಗಿದೆ. ಇದು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಸಿವಿಲ್ ಉದ್ಯೋಗದಲ್ಲಿರುವ ವ್ಯಕ್ತಿಗಳನ್ನು ಇಲಾಖಾ ವಿಚಾರಣೆ ನಡೆಸದೆ ವಜಾಗೊಳಿಸಲು, ತೆಗೆದುಹಾಕಲು ಅಥವಾ ಹಿಂಬಡ್ತಿ ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರ ನೀಡುತ್ತದೆ.
ಉಚ್ಚಾನಾ ಮ್ಯಾಜಿಸ್ಟ್ರೇಟ್ ನೇತೃತ್ವದ ಪ್ರಕರಣದ ವಿಚಾರಣಾ ಸಮಿತಿಯು 390 ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದು, ಅದರಲ್ಲಿ 142 ವಿದ್ಯಾರ್ಥಿನಿಯರು ಸಿಂಗ್ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ ಎಂದು ಜಿಂದ್ ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ರಾನ್ ರಜಾ ಹೇಳಿದ್ದಾರೆ. ಮೊದಲಿಗೆ ಈತ 60 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಮಾತುಗಳು ಕೇಳಿಬಂದಿದ್ದವು. ತನಿಖೆಯ ವೇಳೆ ಆತ ಸುಮಾರು 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ಬಯಲಾಯಿತು. ಅವನಿಗೆ 56 ವರ್ಷ.
ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ವಿದ್ಯಾರ್ಥಿನಿಯರೇ ಹೋರಾಟ ಆರಂಭಿಸಿದ್ದರು. ಅವರು ಕಳೆದ ಆಗಸ್ಟ್ 31ರಂದು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಹರಿಯಾಣ ರಾಜ್ಯಪಾಲ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದರು. ಇದಾದ ಬಳಿಕ ಶಾಲೆಯ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೊನೆಗೆ ಆತನನ್ನು ಬಂಧಿಸಲಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರು, ಅವರ ಪೋಷಕರು ಆಗ್ರಹಿಸಿದ್ದಾರೆ.