Site icon Vistara News

Chandrayaan 3: ದೇಗುಲ ಭೇಟಿ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್‌ ಮೊದಲ ಪ್ರತಿಕ್ರಿಯೆ; ಕುಹಕಿಗಳಿಗೆ ಕುಟುಕಿದ್ದು ಹೀಗೆ…

S Somanath

Want To Continue Chandrayaan Series Till An Indian Lands On Moon: Says ISRO Chief S Somanath

ತಿರುವನಂತಪುರಂ: ಚಂದ್ರಯಾನ 3 ಮಿಷನ್‌ (Chandrayaan 3) ಯಶಸ್ವಿ ಬಳಿಕ ಇದೇ ಮೊದಲ ಬಾರಿಗೆ ತವರು ರಾಜ್ಯ ಕೇರಳಕ್ಕೆ ಭೇಟಿ ನೀಡಿದ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ (S Somanath) ಅವರು ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು ಭದ್ರಕಾಳಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ದೇವಾಲಯಕ್ಕೆ ಭೇಟಿ ನೀಡುವ ಕುರಿತು ಅವರು ಸ್ಪಷ್ಟನೆ ನೀಡಿದರು. ಹಾಗೆಯೇ, “ಸತ್ವಕ್ಕಾಗಿ ವಿಜ್ಞಾನ, ಅಂತಃಸತ್ವಕ್ಕಾಗಿ ದೇವಾಲಯ” ಎಂದು ಹೇಳುವ ಮೂಲಕ ಕುಹಕವಾಡುವವರಿಗೆ ಪರೋಕ್ಷವಾಗಿಯೇ ಚಾಟಿ ಬೀಸಿದರು.

“ನಾನೊಬ್ಬ ಪರಿಶೋಧಕ. ನಾನು ಚಂದ್ರನ ಕುರಿತು ಸಂಶೋಧನೆ, ಅಧ್ಯಯನ ಮಾಡುತ್ತೇನೆ. ಹಾಗೆಯೇ, ನನ್ನೊಳಗಿನ ಅಂತಃಸತ್ವವನ್ನೂ ಹುರಿಗೊಳಿಸುತ್ತೇನೆ. ನಾನು ವಿಜ್ಞಾನ ಹಾಗೂ ಅಧ್ಯಾತ್ಮವನ್ನೂ ಅನ್ವೇಷಿಸುತ್ತೇನೆ. ಹಾಗಾಗಿ, ದೇವಾಲಯಗಳಿಗೆ ಭೇಟಿ ನೀಡುತ್ತೇನೆ, ಧಾರ್ಮಿಕ ಪುಸ್ತಕಗಳನ್ನು ಓದುತ್ತೇನೆ. ಆ ಮೂಲಕ ನಮ್ಮ ಅಸ್ತಿತ್ವ ಹಾಗೂ ಬ್ರಹ್ಮಾಂಡದ ಪಯಣದ ಕುರಿತು ತಿಳಿದುಕೊಳ್ಳಲು ಯತ್ನಿಸುತ್ತೇನೆ” ಎಂದು ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

“ನಾವು ಹೊರಗಿನ ಪ್ರಪಂಚದಲ್ಲಿ ಏನು ಮಾಡುತ್ತೇವೆ, ಯಾವ ಸಂಶೋಧನೆ, ಅಧ್ಯಯನ ಕೈಗೊಳ್ಳುತ್ತೇವೆ ಎಂಬುದು ಎಷ್ಟು ಮುಖ್ಯವೋ, ನಮ್ಮ ಆಂತರ್ಯದ ಭಾವನೆಗಳಿಗೂ ಕಿವಿ ಕೊಡುವುದು, ಆಂತರ್ಯದ ಶೋಧನೆಗೆ ಸಮಯ ನೀಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿಯೇ ನಾನು ಬಾಹ್ಯ ಪ್ರಪಂಚಕ್ಕೆ ವಿಜ್ಞಾನವನ್ನು ನೆಚ್ಚಿಕೊಂಡಿದ್ದರೆ, ಆಂತರಿಕ ಪ್ರಪಂಚಕ್ಕೆ ದೇವಾಲಯಗಳ ಮೊರೆ ಹೋಗುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: Chandrayaan 3: ಚಂದ್ರನ ಗೆದ್ದ ಭಾರತ, ಬಾಹ್ಯಾಕಾಶ ಆಸಕ್ತರ ಮನ ಗೆದ್ದ ವಿಸ್ತಾರ ನ್ಯೂಸ್‌

ಜುಲೈ 14ರಂದು ಚಂದ್ರಯಾನ 3 ರಾಕೆಟ್‌ ಉಡಾವಣೆಗೂ ಮೊದಲು ಇಸ್ರೋ ವಿಜ್ಞಾನಿಗಳು ತಿರುಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಇದಕ್ಕೆ ಕೆಲವೊಂದಿಷ್ಟು ಬುದ್ಧಿಜೀವಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ವಿಜ್ಞಾನಿಗಳಾಗಿ ವಿಜ್ಞಾನದಲ್ಲಿ ನಂಬಿಕೆ ಇಡಬೇಕು ಎಂದೆಲ್ಲ ಹೇಳಿದ್ದರು. ಆದರೂ, ವಿಜ್ಞಾನಿಗಳ ನಂಬಿಕೆ, ಆಚರಣೆ ಪರವಾಗಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಂದ್ರಯಾನ 3 ಮಿಷನ್‌ ಆಗಸ್ಟ್‌ 23ರಂದು ಯಶಸ್ವಿಯಾಗಿದ್ದು, ಭಾನುವಾರ (ಆಗಸ್ಟ್‌ 27) ಸೋಮನಾಥ್‌ ಅವರು ತಿರುವನಂತಪುರಂ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Exit mobile version