ನವದೆಹಲಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (CJI DY Chandrachud) ಅವರು ಚಾಟಿ ಬೀಸಿದ್ದಾರೆ. “ಸುಪ್ರೀಂ ಕೋರ್ಟ್‌ಗೆ ನೀಡುವ ಯಾವುದೇ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವ ವ್ಯವಹಾರವನ್ನೇ ಇಟ್ಟುಕೊಳ್ಳಬೇಡಿ. ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಇಂತಹ ಕ್ರಮ ಅನುಸರಿಸುವುದೇ ಸೂಕ್ತ” ಎಂದು ಚಂದ್ರಚೂಡ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿವೃತ್ತ ಸೈನಿಕರಿಗೆ ಒಂದು ಶ್ರೇಣಿ ಒಂದು ಪಿಂಚಣಿ (OROP) ಅಡಿಯಲ್ಲಿ ಬಾಕಿ ಇರುವ ಮೊತ್ತ ಪಾವತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಇದೇ ವೇಳೆ ಕೇಂದ್ರ ಸರ್ಕಾರವು ಒಆರ್‌ಒಪಿ ಬಾಕಿ ಪಾವತಿ ಕುರಿತ ತನ್ನ ಅಭಿಪ್ರಾಯವನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲು ಮುಂದಾಯಿತು. ಆಗ, ಮುಚ್ಚಿದ ಲಕೋಟೆ ಸಲ್ಲಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ವಿರುದ್ಧ ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.
ಸಿಜೆಐ ಚಂದ್ರಚೂಡ್ ಹೇಳಿದ್ದೇನು?
ನಿವೃತ್ತ ಸೈನಿಕರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹುಫೇಜಾ ಅಹ್ಮದಿ ಅವರಿಗೆ ಕೇಂದ್ರ ಸರ್ಕಾರದ ಅಭಿಪ್ರಾಯದ ಮಾಹಿತಿ ನೀಡಿ ಎಂದು ವೆಂಕಟರಮಣಿ ಅವರಿಗೆ ಸಿಜೆಐ ಚಂದ್ರಚೂಡ್ ಅವರು ಸೂಚಿಸಿದರು. ಆಗ, “ಇದು ಗೌಪ್ಯ ಮಾಹಿತಿಯಾದ ಕಾರಣ ಅವರಿಗೆ ನೀಡಲು ಕಷ್ಟಸಾಧ್ಯ” ಎಂದು ವೆಂಕಟರಮಣಿ ಹೇಳಿದರು. ಇದರಿಂದ ಅಸಮಾಧಾನಗೊಂಡ ಸಿಜೆಐ, “ನಾವು ಸುಪ್ರೀಂ ಕೋರ್ಟ್‌ನಲ್ಲಿ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡುವ ರೂಢಿಯನ್ನೇ ಕೊನೆಗೊಳಿಸಬೇಕು” ಎಂದರು. ಹಾಗೆಯೇ, ಕೇಂದ್ರ ಸರ್ಕಾರದ ಲಕೋಟೆಯನ್ನು ನಿರಾಕರಿಸಿದರು.
“ನಾನು ಈ ರೀತಿಯ ಮುಚ್ಚಿದ ಲಕೋಟೆಗಳ ವಿರುದ್ಧ ಇದ್ದೇನೆ. ನ್ಯಾಯಾಲಯದಲ್ಲಿ ಪಾರದರ್ಶಕತೆ ಇರಬೇಕು. ನಾವು ಇಂತಹ ರೂಢಿಯನ್ನೇ ಕೊನೆಗೊಳಿಸಬೇಕು” ಎಂದರು. ಕೇಂದ್ರ ಸರ್ಕಾರವು ನಿವೃತ್ತ ಸೈನಿಕರಿಗೆ 28 ಸಾವಿರ ಕೋಟಿ ರೂ. ಪಾವತಿ ಬಾಕಿ ಉಳಿಸಿಕೊಂಡಿದೆ. ನಾಲ್ಕು ಕಂತುಗಳಲ್ಲಿ ನಿವೃತ್ತ ಸೈನಿಕರಿಗೆ ಹಣ ಪಾವತಿ ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಇತ್ತೀಚೆಗೆ ಕೋರ್ಟ್ ಖಂಡಿಸಿತ್ತು.
ಅದಾನಿ ವರದಿಯನ್ನೂ ಸುಪ್ರೀಂ ತಿರಸ್ಕರಿಸಿತ್ತು
ಗೌತಮ್ ಅದಾನಿ ಅವರು ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬುದರ ಬಗ್ಗೆ ಹಿಂಡನ್‌ಬರ್ಗ್ ವರದಿ ಪ್ರಕರಣದ ಕುರಿತು ಕೇಂದ್ರ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರಾಕರಿಸಿತ್ತು. ಗೌತಮ್ ಅದಾನಿ ಕುರಿತು ಹಿಂಡನ್‌ಬರ್ಗ್ ಬಹಿರಂಗಪಡಿಸಿದ ವರದಿಯ ಉಲ್ಲೇಖಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂಬುದಾಗಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಕೇಂದ್ರದ ಮುಚ್ಚಿದ ಲಕೋಟೆಯ ವರದಿಯನ್ನು ನಿರಾಕರಿಸಿತ್ತು.
ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿರುವ ಮಸೀದಿ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ