ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ಇಂಡಿಯಾ: ದಿ ಮೋದಿ ಕ್ವಶ್ಚನ್ (India The Modi Question) ಬಿಬಿಸಿ ಡಾಕ್ಯುಮೆಂಟರಿಯ (BBC Documentary On Modi) ವೀಕ್ಷಣೆಗೆ ದೆಹಲಿ ವಿಶ್ವವಿದ್ಯಾಲಯದಲ್ಲೂ ವ್ಯವಸ್ಥೆ ಮಾಡಲಾಗಿದ್ದು, ವಿವಿ ಆವರಣದಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಾಗೆಯೇ, ಕಾನೂನು ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಪೊಲೀಸರು 24 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ (ಜನವರಿ 27) ಸಂಜೆ ಡಾಕ್ಯುಮೆಂಟರಿ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ವಿವಿ ಆವರಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕಲಾ ವಿಭಾಗದಲ್ಲಿ ಗಲಾಟೆಯೂ ನಡೆಯಿತು. ಹಾಗಾಗಿ, ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಭದ್ರತೆ ಒದಗಿಸಿದರು. ಆದರೂ, ಗಲಾಟೆ ಹೆಚ್ಚಾದ ಕಾರಣ 24 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು.
ದೆಹಲಿಯ ಜೆಎನ್‌ಯು, ಹೈದರಾಬಾದ್ ವಿವಿ, ಕೇರಳ ವಿವಿಗಳಲ್ಲಿ ಡಾಕ್ಯುಮೆಂಟರಿ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು ವಿವಿ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲು ಕಾರಣವಾಗಿತ್ತು. ಜೆಎನ್‌ಯುನಲ್ಲಂತೂ ಕಲ್ಲು ತೂರಾಟ ಮಾಡಲಾಗಿತ್ತು. ಮಾಧ್ಯಮದವರ ಮೇಲೆ ಹಲ್ಲೆಯೂ ನಡೆದಿತ್ತು. ಈಗ ದೆಹಲಿ ವಿವಿಯಲ್ಲೂ ಇದೇ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಕೋಲ್ಕೊತಾ ಪ್ರೆಸಿಡೆನ್ಸಿ ವಿವಿಯಲ್ಲೂ ಗಲಾಟೆ
ಬಿಬಿಸಿ ಸಾಕ್ಷ್ಯಚಿತ್ರದ ವೀಕ್ಷಣೆ ಕುರಿತು ಕೋಲ್ಕೊತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲೂ ಗಲಾಟೆಯಾಗಿದೆ. ಶುಕ್ರವಾರ ಸಂಜೆ ಡಾಕ್ಯುಮೆಂಟರಿ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಇದಕ್ಕೂ ಮೊದಲು ವಿದ್ಯುತ್ ಕಡಿತಗೊಳಿಸಿದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿವಿ ಆವರಣದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.
ಇದನ್ನೂ ಓದಿ | BBC Documentary: ಬಿಬಿಸಿಯ ಗುಜರಾತ್ ದಂಗೆಯ ಡಾಕ್ಯುಮೆಂಟರಿ ಪ್ರಶ್ನಿಸಿದ್ದ ಕಾಂಗ್ರೆಸ್ ನಾಯಕ ಆ್ಯಂಟನಿ ಪುತ್ರ ಪಕ್ಷಕ್ಕೆ ರಾಜೀನಾಮೆ!