Site icon Vistara News

Narendra Modi: ಪ್ರಜಾಪ್ರಭುತ್ವ, ಜಾತ್ಯತೀತತೆ, ಏಳಿಗೆಯೇ ನಮ್ಮ ಆದ್ಯತೆ; ಸಂಸತ್ತಿನಲ್ಲಿ ಮೋದಿ ಹೇಳಿಕೆ

Narendra Modi

Lok Sabha Live: PM Narendra Modi's reply to Motion of Thanks on President's address in Lok Sabha

ನವದೆಹಲಿ: “ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ತತ್ವದ ಅನ್ವಯ ಕೆಲಸ ಮಾಡಿದ ಕಾರಣ ದೇಶದ ಜನರು ನಮ್ಮನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಲೋಕಸಭೆಯಲ್ಲಿ (Lok Sabha) ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಅವರು ಮಾತನಾಡಿದರು. ಇದೇ ವೇಳೆ ಅವರು, ದೇಶದ ಸಂವಿಧಾನ, ಜಾತ್ಯತೀತ ಮನೋಭಾವ, ಸರ್ವರ ಏಳಿಗೆ ಸೇರಿ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.

ತುಷ್ಟೀಕರಣ ಇಲ್ಲ, ಸಂತುಷ್ಟೀಕರಣದ ಅನ್ವಯ ಆಡಳಿತ

“ಕಳೆದ ಹಲವು ದಶಕಗಳಿಂದ ತುಷ್ಟೀಕರಣದ ರಾಜಕೀಯವು ಮನೆ ಮಾಡಿತ್ತು. ಇದರಿಂದ ಸರ್ವರ ಏಳಿಗೆಯು ಸಾಧ್ಯವಾಗಿಲ್ಲ. ಆದರೆ, ನಾವು 10 ವರ್ಷದಿಂದ ತುಷ್ಟೀಕರಣದ ರಾಜಕೀಯ ಮಾಡುವ ಬದಲು, ಜನರ ಸಂತುಷ್ಟೀಕರಣದ ಆಡಳಿತ ನೀಡಿದೆವು. ವಿಕಸಿತ ಭಾರತ ನಿರ್ಮಾಣದ ಗುರಿಯೊಂದಿಗೆ ನಾವು ಆಡಳಿತ ನೀಡಿದ ಕಾರಣ, ವಿಕಸಿತ ಭಾರತದ ಕನಸು ನನಸು ಮಾಡಲು ದೇಶದ ಜನರು ನಮಗೆ ಅವಕಾಶ ನೀಡಿದ್ದಾರೆ. ಭಾರತವು ವಿಕಸಿತವಾದರೆ ಕೋಟಿ ಕೋಟಿ ಜನರ ಆಶೋತ್ತರಗಳು ಈಡೇರಲಿವೆ, ಹೊಸ ಪೀಳಿಗೆಯ ಕನಸುಗಳು ಸಾಕಾರವಾಗಲಿವೆ, ಜಗತ್ತಿನಲ್ಲಿ ದೇಶದ ಘನತೆ, ಸಾಮರ್ಥ್ಯ ಹೆಚ್ಚಾಗಲಿದೆ” ಎಂಬುದಾಗಿ ಹೇಳಿದರು.

“ಜಗತ್ತಿನಲ್ಲೇ ಬೃಹತ್‌ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಯಶಸ್ವಿಯಾಗಿ ಲೋಕಸಭೆ ಚುನಾವಣೆ ನಡೆದಿದೆ. ದೇಶದ ಜನರು ನಮಗೆ ಆಡಳಿತ ನಡೆಸಲು, ಸೇವೆ ಮಾಡಲು ಮತ್ತೊಂದು ಅವಕಾಶ ನೀಡಿದ್ದಾರೆ. ಪ್ರತಿಪಕ್ಷಗಳನ್ನು ದೇಶದ ಜನ ಮತ್ತೊಮ್ಮೆ ನಿರಾಕರಿಸಿದ್ದಾರೆ. ನಮಗೆ ಮೂರನೇ ಬಾರಿ ಅವಕಾಶ ನೀಡಿರುವುದು ಮಹತ್ವದ ಸಂಗತಿಯಾಗಿದೆ. ಇದು ಗೌರವಪೂರ್ಣ ಸಂಗತಿಯೂ ಆಗಿದೆ” ಎಂದು ಹೇಳಿದರು.

“ಕಳೆದ 10 ವರ್ಷಗಳ ಉತ್ತಮ ಆಡಳಿತವನ್ನು ನೋಡಿ ದೇಶದ ಜನ ನಮಗೆ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಹೊರಗೆ ತಂದಿದ್ದು ಸೇರಿ ಹಲವು ಉತ್ತಮ ಕೆಲಸಗಳು ನಮ್ಮ ಗೆಲುವಿಗೆ ಕಾರಣವಾಗಿವೆ. 2014ರಲ್ಲಿ ನಾವು ಒಂದು ವಿಷಯ ಹೇಳಿದ್ದೆವು. ಭ್ರಷ್ಟಾಚಾರದ ವಿರುದ್ಧ ನಾವು ಶೂನ್ಯ ಸಹಿಷ್ಣುಗಳಾಗಿರುತ್ತೇವೆ ಎಂದಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಿದೆವು. ಶೂನ್ಯ ಸಹಿಷ್ಣುತೆಯನ್ನು ತೋರಿಸಿದ ಕಾರಣಕ್ಕಾಗಿ ಜನ ಬೆಂಬಲ ನೀಡಿದ್ದಾರೆ” ಎಂದರು.

ನೂತನ ಸಂಸದರಿಗೆ ಅಭಿನಂದನೆ

ನೂತನ ಸಂಸದರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ನೂತನ ಸಂಸದರಿಗೆ ಅಭಿನಂದನೆಗಳು. ನೂತನ ಸಂಸದರು ಸದನದ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಅನುಭವಿ ಸಂಸದರಂತೆ ವರ್ತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನೂತನ ಸಂಸದರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಕೂಡ ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: Akhilesh Yadav: ಎಲ್ಲ ಕ್ಷೇತ್ರ ಗೆದ್ದರೂ ಇವಿಎಂಗಳನ್ನು ನಂಬಲ್ಲ ಎಂದ ಅಖಿಲೇಶ್‌ ಯಾದವ್;‌ ಮತ್ತೆ ವಿವಾದ

Exit mobile version