Site icon Vistara News

Security threat: ಆಂಧ್ರದಲ್ಲಿ ಮೋದಿ ಹೆಲಿಕಾಪ್ಟರ್ ಸಮೀಪವೇ ಹಾರಾಡಿದ ಕಪ್ಪು ಬಲೂನುಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ವಿಮಾನದ ಸಮೀಪವೇ ರಾಶಿ ರಾಶಿ ಕಪ್ಪು ಬಲೂನುಗಳು ಹಾರಾಡಿ ಆತಂಕ ಸೃಷ್ಟಿಸಿದ ವಿದ್ಯಮಾನ ಸೋಮವಾರ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಇದು ಮೋದಿ ಅವರ ಭದ್ರತೆಗೆ ಭಾರಿ ಅಪಾಯಕಾರಿಯಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆಂಧ್ರ ಪ್ರದೇಶ ಕಾಂಗ್ರೆಸ್‌ ಮೋದಿ ಅವರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಕೆಲವು ಬಲೂನುಗಳನ್ನು ಹಾರಿಸಲಾಗಿದ್ದು, ಅವುಗಳಲ್ಲಿ ಕೆಲವು ಮೋದಿ ಅವರ ‌ ಹೆಲಿಕಾಪ್ಟರ್‌ನ ಅತ್ಯಂತ ಸಮೀಪದಲ್ಲೇ ಹಾರಿವೆ. ಒಂದು ಕಡೆ ಕಾಂಗ್ರೆಸ್‌ನ ಪ್ರತಿಭಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದರೆ, ಈ ವಿದ್ಯಮಾನ ಭದ್ರತಾ ವೈಫಲ್ಯ ಎಂದು ಕೂಡಾ ಬಿಂಬಿತವಾಗುತ್ತಿದೆ.

ಮೋದಿ ಅವರು ಪ್ರಯಾಣಿಸುತ್ತಿರುವ ವಿಮಾನದ ಸಮೀಪವೇ ಕಪ್ಪು ಬಲೂನುಗಳು ಹಾರಾಡುತ್ತಿರುವುದನ್ನು ಗಮನಿಸಬಹುದು.

ಮೋದಿ ಅವರು ಗಣ್ಣಾವರಂ ವಿಮಾನ ನಿಲ್ದಾಣದಿಂದ ಹೊರಟು ವಿಜಯವಾಡಕ್ಕೆ ಹೋಗುವ ದಾರಿಯಲ್ಲಿ ಕಪ್ಪು ಬಲೂನುಗಳು ಹೆಲಿಕಾಪ್ಟರ್‌ನ ಅತ್ಯಂತ ಸಮೀಪದ ಹಾರಾಡಿರುವುದು ದಾಖಲಾಗಿದೆ. ಒಂದು ಕಡೆ ಬಲೂನುಗಳು ಆಕಾಶದಲ್ಲಿ ಹಾರಾಡುತ್ತಾ ಎತ್ತೆತ್ತಲೋ ಸಾಗುತ್ತಿದ್ದರೆ, ಹೆಲಿಕಾಪ್ಟರ್‌ ಸಾಗುವ ಹಾದಿಯಲ್ಲೇ ನಾಲ್ಕೈದು ಬಲೂನುಗಳು ಹಾರಿವೆ.

ಕಾಂಗ್ರೆಸ್‌ ಪ್ರತಿಭಟನೆ
ಮೋದಿ ಅವರು ಗಣ್ಣಾವರಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ವೇಳೆ ಅಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು. ಆದರೆ, ಕೆಲವರು ಕಟ್ಟಡದ ಮೇಲಿನಿಂದ ನಿಂತು ಕಪ್ಪು ಬಲೂನುಗಳನ್ನು ಹಾರಿಸಿದ್ದರು.

ವಿಮಾನ ನಿಲ್ದಾಣದ ಸಮೀಪವೇ ಈ ಪ್ರದರ್ಶನ ನಡೆದಿದ್ದು, ಹೆಲಿಕಾಪ್ಟರ್‌ ಹಾರುವ ಕೆಲವೇ ನಿಮಿಷಗಳ ಮೊದಲು ಬಲೂನುಗಳನ್ನು ಹಾರಿಬಿಡಲಾಗಿದೆ. ಜತೆಗೆ ʻಮೋದಿ ಗೋ ಬ್ಯಾಕ್‌ʼ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಅದೃಷ್ಟವಶಾತ್‌ ಮೋದಿ ಅವರ ಹೆಲಿಕಾಪ್ಟರ್‌ಗೆ ಯಾವುದೇ ತೊಂದರೆಯಾಗಿಲ್ಲ. ಅದರೆ, ಇದೊಂದು ದೊಡ್ಡ ಪ್ರಮಾಣದ ಭದ್ರತಾ ವೈಫಲ್ಯ ಎಂದು ಪರಿಗಣಿಸಲಾಗಿದೆ.

ಮೋದಿ ಬಂದಿದ್ದು ಯಾಕೆ?
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಂ ರಾಜು ಅವರ ೧೨೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮೋದಿ ಅವರು ಆಗಮಿಸಿದ್ದರು. ಅಲ್ಲಿ ಅವರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ೧೫ ಟನ್‌ ತೂಕದ ಪ್ರತಿಮೆಯನ್ನು ಅನಾವರಣಗೊಳಿಸಿದರು.

ನಾಲ್ವರು ಕಾಂಗ್ರೆಸಿಗರ ಬಂಧನ
ಈ ನಡುವೆ, ಪ್ರಧಾನಿ ಪ್ರಯಾಣಿಸುವ ಸಂದರ್ಭದಲ್ಲಿ ಬಲೂನು ಹಾರಿಸಿ ಭದ್ರತೆಗೆ ಆತಂಕ ಉಂಟು ಮಾಡಿದ ಆರೋಪದಲ್ಲಿ ನಾಲ್ವರು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ನಲ್ಲೂ ಆತಂಕ ಎದುರಾಗಿತ್ತು
ಪ್ರಧಾನಿ ಮೋದಿ ಅವರು ಕೆಲವು ತಿಂಗಳ ಹಿಂದೆ ಪಂಜಾಬ್‌ನ ಮೊಹಾಲಿಗೆ ರ‍್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರಸ್ತೆ ಮಧ್ಯೆ ರೈತ ಪ್ರತಿಭಟನಾಕಾರರು ತಡೆ ಒಡ್ಡಿ ಆತಂಕ ಎದುರಾಗಿತ್ತು. ಹೆದ್ದಾರಿಯಲ್ಲಿ ಪ್ರತಿಭಟನೆಯ ಮುನ್ಸೂಚನೆ ಇದ್ದರೂ ಅದೇ ದಾರಿಯಲ್ಲಿ ಪ್ರಧಾನಿ ಅವರ ಓಡಾಟಕ್ಕೆ ವ್ಯವಸ್ಥೆ ಮಾಡಿದ್ದು, ರೈತರು ಹೆದ್ದಾರಿಗೆ ನುಗ್ಗಲು ಅವಕಾಶ ಮಾಡಿಕೊಟ್ಟಿದ್ದು ಭಾರಿ ವಿವಾದಕ್ಕೆ ಒಳಗಾಗಿತ್ತು.

ಇದನ್ನೂ ಓದಿ| Modi In Karnataka | ಬೆಂಗಳೂರಲ್ಲಿ ಪ್ರಧಾನಿ ಭದ್ರತೆ ನೋಡ್ಕೊಳ್ಳುತ್ತಿರೋದು ಎಷ್ಟು ಸಾವಿರ ಪೊಲೀಸರು?

Exit mobile version