ಮುಂಬಯಿ: ಶಿವಸೇನಾದಿಂದ ಬಂಡಾಯವೆದ್ದು ಅಘಾಡಿ ಸರ್ಕಾರವನ್ನೇ ಉರುಳಿಸಿರುವ ರೆಬೆಲ್ ಶಾಸಕರ ಪಡೆ ಮುಂಬಯಿಗೆ ಇಂದು ಬಂದಿಳಿಯಲಿದೆ. ಹೀಗಾಗಿ ಮುಂಬಯಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
೧೦ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬಯಿ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯ ಮೀಸಲು ಪಡೆ ಪೊಲೀಸರು ಮತ್ತು ಗಲಭೆ ನಿಯಂತ್ರಣ ಪೊಲೀಸ್ ಪಡೆ ಸನ್ನದ್ಧವಾಗಿದೆ.
ಮುಂಬಯಿ ಮಹಾ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೆಕ್ಷನ್ ೧೪೪ ಅಡಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ವಿಮಾನ ನಿಲ್ದಾಣದಿಂದ ರೆಬೆಲ್ ಶಾಸಕರು ನಗರದಲ್ಲಿ ಸಂಚರಿಸುವ ದಾರಿಯುದ್ದಕ್ಕೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಾನೂನು ಸುವ್ಯವಸ್ಥೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಂಟಿ ಆಯುಕ್ತ ವಿಶ್ವಾಸ್ ನಗೇರ್ ಪಾಟೀಲ್ ತಿಳಿಸಿದ್ದಾರೆ. ಶಿವಸೇನಾದ ಉದ್ರಿಕ್ತ ಕಾರ್ಯಕರ್ತರು ರೆಬೆಲ್ ಶಾಸಕರನ್ನು ಗುರಿಯಾಗಿಟ್ಟು ದಾಳಿ ನಡೆಸುವ ಬೆದರಿಕೆ ಹಾಕಿದ್ದರು. ಹೀಗಾಗಿ ಕಟ್ಟೆಚ್ಚರ ವಹಿಸಲಾಗಿದೆ. ೨೦ಕ್ಕೂ ಹೆಚ್ಚು ಉಪ ಆಯುಕ್ತರು, ೪೫ ಸಹಾಯಕ ಆಯುಕ್ತರು, ೨೨೫ ಪೊಲೀಸ್ ಇನ್ಸ್‌ಪೆಕ್ಟರ್, ಎಸ್‌ಆರ್‌ಪಿಎಫ್‌ನ ೧೦ ತುಕಡಿಗಳು ಮುಂಬಯಿನ ಭದ್ರತೆಯನ್ನು ಗುರುವಾರ ನೋಡಿಕೊಳ್ಳಲಿವೆ.