Site icon Vistara News

e-rickshaw | ಕಣಿವೆ ರಾಜ್ಯ ಕಾಶ್ಮೀರದ ಮೊದಲ ಇ-ರಿಕ್ಷಾ ಚಾಲಕಿ ಸೀಮಾ ದೇವಿ

Seema Devi

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ತೀವ್ರವಾದದ ಬೆಂಕಿಯಲ್ಲಿ ಅರಳುವ ಕೆಲವು ಹೂವುಗಳು ಆಗೀಗ ಸುದ್ದಿ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಖತುವಾದ ಪೂಜಾ ದೇವಿ (Pooja Devi) ಕಣಿವೆ ರಾಜ್ಯದಲ್ಲಿ ಬಸ್‌ ಮತ್ತು ಟ್ರಕ್‌ ಚಾಲನೆ ಮಾಡಿದ ಮೊದಲ ಮಹಿಳೆ ಎಂಬ ಹೆಮ್ಮೆಗೆ ಪಾತ್ರರಾಗಿದ್ದರು. ಇದೀಗ ನಾಗ್ರೋಟ ಪ್ರದೇಶದ ಸೀಮಾ ದೇವಿ (Seema Devi) ರಾಜ್ಯದ ಮೊದಲ ಇ-ರಿಕ್ಷಾ (e-rickshaw) ಚಾಲಕಿ ಎನಿಸಿದ್ದಾರೆ.

ಏರುತ್ತಿರುವ ಬೆಲೆಗಳ ಬಿಸಿಯಲ್ಲಿ ಬಸವಳಿದಿದ್ದ ತಮ್ಮ ಕುಟುಂಬಕ್ಕೆ ಆಧಾರವಾಗಬೇಕೆಂದು ಬಯಸಿದ್ದ ಸೀಮಾ ಅವರಿಗೆ ಬೇರೆ ಕೆಲಸಗಳು ದೊರೆಯಲಿಲ್ಲ. ಈ ಹಂತದಲ್ಲಿ ಸೀಮಾರ ಬೆಂಬಲಕ್ಕೆ ನಿಂತ ಅವರ ಪತಿ, ಮಾಸಿಕ ಮೂರು ಸಾವಿರದ ಕಂತಿನ, ೩೦,೩೦೦ ರೂ. ಸಾಲದ ಮೇಲೆ ಇ-ರಿಕ್ಷಾ ಖರೀದಿಸಿದರು. ರಿಕ್ಷಾ ಚಾಲನೆಯನ್ನು ಪತ್ನಿಗೆ ಕಲಿಸಿದರು. ಕಳೆದ ನಾಲ್ಕು ತಿಂಗಳುಗಳಿಂದ ರಿಕ್ಷಾ ಚಾಲಕಿಯಾಗಿರುವ ಮೂವರು ಮಕ್ಕಳ ತಾಯಿ ಸೀಮಾ, ಸ್ವಾವಲಂಬಿಯಾಗಿ ದುಡಿಯುತ್ತಿದ್ದಾರೆ. ಈ ಮೂಲಕ ಸಮಾಜದ ಅಗೋಚರ ಛಾವಣಿಯನ್ನು ಮುರಿಯುತ್ತಿದ್ದಾರೆ.

“ಮಹಿಳೆಯರು ರೈಲು, ವಿಮಾನವನ್ನೆಲ್ಲಾ ಚಲಾಯಿಸುವಾಗ ಇ-ರಿಕ್ಷಾ ಚಾಲನೆ ದೊಡ್ಡದಲ್ಲ ಎನಿಸಿತು. ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ನನಗೆ ವಿವಾಹವಾಗಿತ್ತು. ನನಗೆ ಓದುವುದು ಪ್ರಿಯವಾಗಿದ್ದರೂ ನನಗದು ದೊರೆಯಲಿಲ್ಲ. ಈಗ ನನ್ನ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆ ನನ್ನದು” ಎನ್ನುವ ೪೦ರ ಹರೆಯದ ಸೀಮಾಗೆ ೧೫ ವರ್ಷದ ಮಗ, ೧೪ ಮತ್ತು ೧೨ರ ಹರೆಯದ ಹೆಣ್ಣುಮಕ್ಕಳಿದ್ದಾರೆ.

“ಮಹಿಳೆಯನ್ನು ಕೆಲವೇ ಕೆಲಸಗಳಿಗೆ ಸೀಮಿತಗೊಳಿಸುವ ಅಗತ್ಯವಿಲ್ಲ. ಆರಂಭದಲ್ಲಿ ನಮ್ಮ ಕುಟುಂಬದವರೆಲ್ಲಾ ನನ್ನ ಕೆಲಸದ ದೆಸೆಯಿಂದ ಟೀಕೆಗೆ ಒಳಗಾಗಿದ್ದೆವು. ಆದರೆ ನನ್ನ ಬೆಂಬಲಕ್ಕೆ ನನ್ನ ಪತಿ ಇದ್ದರು. ನನ್ನ ಕುಟುಂಬ ಸದಾ ನನ್ನೊಂದಿಗಿತ್ತು. ದಾರಿಯಲ್ಲೂ ನನ್ನೆಡೆಗೆ ವಿಚಿತ್ರ ನೋಟ ಬೀರುತ್ತಿದ್ದರು. ಆಗೆಲ್ಲಾ ಮುಜುಗರ ಎನಿಸುತ್ತಿತ್ತು. ಆದರೀಗ ಬಹಳಷ್ಟು ಬದಲಾಗಿದೆ. ಮಹಿಳೆಯರು ನನ್ನ ರಿಕ್ಷಾದಲ್ಲಿ ನಿರುಮ್ಮಳವಾಗಿ ಕುಳಿತುಕೊಳ್ಳುತ್ತಾರೆ.” ಎಂದು ಹೆಮ್ಮೆಯಿಂದ ಹೇಳುತ್ತಾರೆ ಸೀಮಾ.

ಬೆಳಗ್ಗೆ ಬೇಗನೆ ರಿಕ್ಷಾ ಚಾಲನೆಯನ್ನು ಆರಂಭಿಸುವ ತಮಗೆ ಇದರಿಂದ ಮನೆ ಕೆಲಸದ ಹೊಣೆ ಹೊರೆ ಎನಿಸಿಲ್ಲ ಎನ್ನುವ ಸೀಮಾ, ಹುಡುಗಿಯರನ್ನು ಶಾಲೆಗೆ ಬಿಡುವುದಕ್ಕಾಗಿ ಕೆಲವು ಪೋಷಕರು ತಮ್ಮನ್ನು ಅವಲಂಬಿಸಿದ್ದಾರೆ ಎಂದು ವಿಶ್ವಾಸದ ನಗೆ ಬೀರುತ್ತಾರೆ.

ಇದನ್ನೂ ಓದಿ | Last Kashmiri Pandit | ಕಾಶ್ಮೀರ ತೊರೆದು ಜಮ್ಮುವಿಗೆ ವಲಸೆ ಬಂದ ಕೊನೆಯ ಕಾಶ್ಮೀರಿ ಪಂಡಿತ ಮಹಿಳೆ!

Exit mobile version