ಲಖನೌ: ಪಬ್ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಉತ್ತರ ಪ್ರದೇಶದ ಸಚಿನ್ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ (Seema Haider) ಲವ್ ಸ್ಟೋರಿಯು ದೇಶಾದ್ಯಂತ ಸುದ್ದಿಯಾಗಿದೆ. ಸೀಮಾ ಹೈದರ್ ಹಾಗೂ ಸಚಿನ್ ಮೀನಾ (Sachin Meena) ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ವಾಸಿಸುತ್ತಿದ್ದು, ಇವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ರೀಲ್ಸ್ಗಳು ವೈರಲ್ ಆಗುತ್ತಿವೆ. ಅದರಲ್ಲೂ, ಇತ್ತೀಚೆಗೆ ಸಚಿನ್ ಮೀನಾ ಸೂಟು-ಬೂಟು ತೊಟ್ಟು, ಸೀಮಾ ಹೈದರ್ ಸೀರೆಯುಟ್ಟು ಮಾಡಿದ ರೀಲ್ಸ್ ಭಾರಿ ವೈರಲ್ ಆಗಿದೆ.
ಹೌದು, ಸೂಟು-ಬೂಟು ತೊಟ್ಟ ಸಚಿನ್ ಮೀನಾ ಸೀಮಾ ಹೈದರ್ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಭಾರತದ ಸಂಪ್ರದಾಯದಂತೆ ಸೀರೆಯುಟ್ಟ ಸೀಮಾ ಹೈದರ್, ಸಚಿನ್ನೆಡೆಗೆ ಮುಗುಳ್ನಗು ಸೂಸಿದ್ದಾರೆ. ಸೀಮಾ ಹೈದರ್ ಅವರು ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಅಪ್ಲೋಡ್ ಹಾಕುತ್ತಲೇ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ವಿಡಿಯೊವನ್ನು 1.6 ಕೋಟಿ ಜನ ವೀಕ್ಷಿಸಿದ್ದಾರೆ. 4 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ವೈರಲ್ ವಿಡಿಯೊ
“ನಮಗೆ ಸೀಮಾ ಹೈದರ್ ಅವರ ಬಗ್ಗೆ ಗರ್ವವಿದೆ. ಅವರು ಪಾಕಿಸ್ತಾನದಿಂದ ಬಂದು ಭಾರತದ ಹಿಂದು ಧರ್ಮವನ್ನು ಪಾಲಿಸುತ್ತಿದ್ದಾರೆ. ಭಾರತೀಯರ ಬೆಂಬಲ ಅವರಿಗೆ ಸದಾ ಇದೆ. ಜೈ ಶ್ರೀರಾಮ್” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಇಬ್ಬರೂ ಹೀಗೆ ಯಾವಾಗಲೂ ನಗುತ್ತ ಇರಿ, ಜತೆಯಾಗಿ ಇರಿ” ಎಂದು ಮತ್ತೊಬ್ಬರು ಹರಿಸಿದ್ದಾರೆ. ಹೀಗೆ, ಸಾವಿರಾರು ಜನ ಜೋಡಿಗೆ ಶುಭ ಹಾರೈಸಿದ್ದಾರೆ.
ಜೋಡಿಯ ಮತ್ತೊಂದು ವಿಡಿಯೊ
ಇದನ್ನೂ ಓದಿ: Seema Haider: ಪೌರತ್ವಕ್ಕಾಗಿ ನಟ ಅಕ್ಷಯ್ ಕುಮಾರ್ ಉದಾಹರಣೆ ಕೊಟ್ಟ ಸೀಮಾ; ಲೈಲಾ-ಮಜ್ನು ಲವ್ ಎಂದ ಮಹಿಳೆ
2020ರಲ್ಲಿ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪಬ್ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್, ಆಕೆಯ ನಾಲ್ಕು ಮಕ್ಕಳು, ಸಚಿನ್ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್ ವಿಚಾರಣೆ ಕೂಡ ನಡೆಸಿದೆ.