Site icon Vistara News

ವಿಸ್ತಾರ Explainer: ಹೊಸ ಸಂಸತ್​ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?

Sengol presented to PM Modi

#image_title

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಇಂದು ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ಮೋದಿ (PM Modi)ಯವರು ಉದ್ಘಾಟನೆ ಮಾಡಿದ್ದಾರೆ. ಹಾಗೇ, ಹೊಸದಾಗಿ ನಿರ್ಮಾಣವಾದ ಸಂಸತ್​ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್​)ವನ್ನು ಪ್ರತಿಷ್ಠಾಪಿಸಿದ್ದಾರೆ. ಸ್ಪೀಕರ್​ ಕುರ್ಚಿಯ ಪಕ್ಕವೇ ರಾಜದಂಡವೂ ನಿಂತಿದೆ.

ʼ‘ಸೆಂಗೋಲ್ ಅಂದರೆ ರಾಜದಂಡ ಎಂಬುದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್​ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್​​ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಇದು ಎಲ್ಲಿತ್ತು?

ʼ‘ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗುತ್ತಿದ್ದಂತೆ, ಅದನ್ನು ಹೊಸ ಸಂಸತ್​ ಭವನದಲ್ಲಿ ಇಡಲು ತೀರ್ಮಾನಿಸಿದ್ದಾರೆ. ಸೆಂಗೋಲ್​ ಎಂದರೆ ತಮಿಳಿನ ಭಾಷೆಯಲ್ಲಿ ಸಮೃದ್ಧ ಸಂಪತ್ತು ಎಂದರ್ಥ’ʼ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಇದನ್ನೂ ಓದಿ: Photo Gallery | ಆಕರ್ಷಕ ಹೊಸ ಸಂಸತ್‌ ಭವನ! ಗಮನ ಸೆಳೆಯುತ್ತಿವೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಚಿತ್ರಗಳು

ಏನೀ ಸೆಂಗೋಲ್‌ನ ಇತಿಹಾಸ?

ತಮಿಳುನಾಡು ಮೂಲದ ಚೋಳ ರಾಜವಂಶ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಸಾಧಾರಣ ಕೊಡುಗೆ ನೀಡಿತ್ತು. ಚೋಳರ ಕಾಲದಲ್ಲಿ ಸೆಂಗೋಲ್ ಎಂಬುದು ರಾಜರ ಪಟ್ಟಾಭಿಷೇಕದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿತ್ತು. ಇದೊಂದು ಧಾರ್ಮಿಕ ಮಹತ್ವ ಹೊಂದಿರುವ ರಾಜದಂಡ. ಚಂದದ ಕೆತ್ತನೆಗಳು, ಸಂಕೀರ್ಣವಾದ ಅಲಂಕಾರಿಕ ಅಂಶಗಳು ಇದರ ವೈಶಿಷ್ಟ್ಯ. ರಾಜಪರಂಪರೆಯ ಪಾಲಿಗೆ ಇದು ಪವಿತ್ರ ಲಾಂಛನ. ಒಬ್ಬ ಆಡಳಿತಗಾರನಿಂದ ಮುಂದಿನವರಿಗೆ ಅಧಿಕಾರದ ವರ್ಗಾವಣೆಯನ್ನು ಇದು ಪ್ರತಿನಿಧಿಸುತ್ತಿತ್ತು.

ಬ್ರಿಟಿಷರು ಭಾರತೀಯರ ಕೈಗೆ ಅಧಿಕಾರ ಹಸ್ತಾಂತರಿಸಲಿದ್ದ ಸಂದರ್ಭದಲ್ಲಿ, ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಪಂಡಿತ್ ಜವಾಹರಲಾಲ್ ಮುಂದೆ ಒಂದು ಪ್ರಶ್ನೆಯನ್ನು ಇಟ್ಟರು. ಈ ಮಹತ್ವದ ಘಟನೆಯನ್ನು ಸೂಚಿಸಲು ಸೂಕ್ತವಾದ ಸಮಾರಂಭ ಹೇಗೆ ಮಾಡಬಹುದು ಎಂದು ವಿಚಾರಿಸಿದರು. ನೆಹರೂ ಅವರು ಈ ಪ್ರಶ್ನೆಯನ್ನು ಆ ಕಾಲದ ದೊಡ್ಡ ಮುತ್ಸದ್ಧಿ ಸಿ.ರಾಜಗೋಪಾಲಾಚಾರಿ (ರಾಜಾಜಿ) ಯವರ ಮುಂದಿಟ್ಟರು.

ರಾಜಾಜಿಯವರು ಚೋಳ ರಾಜವಂಶದ ʼರಾಜದಂಡʼದ ಕ್ರಮದಿಂದ ಸ್ಫೂರ್ತಿ ಪಡೆಯುವಂತೆ ನೆಹರೂಗೆ ಸಲಹೆ ನೀಡಿದರು. ರಾಜಾಜಿಯವರ ಪ್ರಕಾರ ಚೋಳ ಮಾದರಿಯ ಅಧಿಕಾರ ಹಸ್ತಾಂತರ ʼಸೆಂಗೋಲ್ʼನ ಸಾಂಕೇತಿಕ ಹಸ್ತಾಂತರವನ್ನು ಒಳಗೊಂಡಿತ್ತು. ಒಬ್ಬ ರಾಜ ತನ್ನ ಉತ್ತರಾಧಿಕಾರಿಗೆ ಅಧಿಕಾರ ಮತ್ತು ಶಕ್ತಿಯ ಸಂಕೇತವಾದ ಸೆಂಗೋಲ್‌ ಹಸ್ತಾಂತರಿಸುತ್ತಿದ್ದ. ಇದು ʼಧರ್ಮʼವನ್ನು ಪ್ರತಿನಿಧಿಸುತ್ತಿತ್ತು. ಧರ್ಮ ಹಾಗೂ ನ್ಯಾಯಯುತವಾಗಿ ಅಧಿಕಾರವನ್ನು ನಡೆಸುವ ವಚನವನ್ನು ಈ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು.

ಸೆಂಗೋಲ್‌ ಅನ್ನು ಪಡೆಯಲು ರಾಜಾಜಿಯವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ʼತಿರುವವಾಡುತುರೈ ಅಧೀನಂʼ ಎಂಬ ಧಾರ್ವಿುಕ ಮಠವನ್ನು ಸಂಪರ್ಕಿಸಿದರು. ಇದು ಶಿವನ ಬೋಧನೆ ಮತ್ತು ಸಂಪ್ರದಾಯ ಅನುಸರಿಸುವ ಬ್ರಾಹ್ಮಣೇತರ ಸನ್ಯಾಸಿಗಳ ಸಂಸ್ಥೆ. 500ಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸೆಂಗೋಲ್‌ ತಯಾರಿಕೆಯಲ್ಲಿ ಇವರ ನೆರವನ್ನು ರಾಜಾಜಿ ಬಯಸಿದರು.

ರಾಜಾಜಿ, ಜವಾಹರಲಾಲ್ ನೆಹರೂ

ತಿರುವವಾಡುತುರೈ ಅಧೀನಂ ಮುಖ್ಯಸ್ಥರು ಸೆಂಗೋಲ್ ಅನ್ನು ರಚಿಸುವ ಹೊಣೆ ಹೊತ್ತರು. ಆಗಿನ ಕಾಲದ ಹೆಸರಾಂತ ಆಭರಣ ತಯಾರಕ ಹಾಗೂ ವ್ಯಾಪಾರಿಗಳಾದ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಎಂಬವರಿಗೆ ಇದನ್ನು ತಯಾರಿಸುವ ಕೆಲಸವನ್ನು ವಹಿಸಲಾಯಿತು. ವುಮ್ಮಿಡಿ ಕುಟುಂಬವು ಸೆಂಗೋಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಅಂದು ಸೆಂಗೋಲ್‌ ತಯಾರಿಯಲ್ಲಿ ಭಾಗವಹಿಸಿದ್ದ ಇಬ್ಬರು ಕುಶಲಕರ್ಮಿಗಳು ಇಂದಿಗೂ ಜೀವಂತವಿದ್ದಾರೆ. ಅವರೇ ವುಮ್ಮಿಡಿ ಎತ್ತಿರಾಜುಲು (96) ಮತ್ತು ವುಮ್ಮಿಡಿ ಸುಧಾಕರ್ (88).

ನೋಡಲು ಸುಂದರವಾಗಿರುವ ಈ ಸೆಂಗೋಲ್‌ ಸುಮಾರು ಐದು ಅಡಿ ಉದ್ದವಿದೆ. ನ್ಯಾಯ ಹಾಗೂ ಪರಿಶ್ರಮದ ಸಂಕೇತವಾದ ನಂದಿಯ ಪ್ರತಿಕೃತಿ ಸೆಂಗೋಲ್‌ನ ತುದಿಯಲ್ಲಿದೆ.

ಇದರ ತಯಾರಿಯ ಬಳಿಕ ಇದನ್ನು ತೆಗೆದುಕೊಂಡು, ಐತಿಹಾಸಿಕ ದಿನವಾದ 1947ರ ಆಗಸ್ಟ್ 14ರಂದು ಅಧಿಕಾರ ಹಸ್ತಾಂತರದಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಮೂವರು ದಿಲ್ಲಿಗೆ ತೆರಳಿದರು. ತಿರುವವಾಡುತುರೈ ಅಧೀನಂನ ಪ್ರಧಾನ ಅರ್ಚಕರು, ನಾದಸ್ವರಂ ವಾದಕ ರಾಜರತ್ನಂ ಪಿಳ್ಳೈ ಮತ್ತು ಓದುವರ್ (ಗಾಯಕ) ತಂಡದಲ್ಲಿದ್ದರು. ಪ್ರಧಾನ ಅರ್ಚಕರು ಸೆಂಗೋಲ್ ಅನ್ನು ಲಾರ್ಡ್ ಮೌಂಟ್ ಬ್ಯಾಟನ್‌ಗೆ ಅರ್ಪಿಸಿದರು. ನಂತರ ವೈಸರಾಯ್‌ ಕಡೆಯಿಂದ ಅದನ್ನು ಪಡೆದು, ಅದನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ, ಪಂಡಿತ್ ಜವಾಹರಲಾಲ್ ನೆಹರು ಅವರ ನಿವಾಸಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಅಲ್ಲಿ ಅದನ್ನು ನೆಹರೂ ಅವರಿಗೆ ಹಸ್ತಾಂತರಿಸಲಾಯಿತು.

ಹೀಗೆ ದೇಶದ ಇತಿಹಾಸದ ಮಹತ್ವದ ಮೈಲಿಗಲ್ಲೊಂದನ್ನು ಪ್ರತಿನಿಧಿಸಿದ, ಸ್ವತಂತ್ರ ರಾಷ್ಟ್ರವಾಗಿ ತನ್ನ ಪ್ರಯಾಣವನ್ನು ದೇಶ ಆರಂಭಿಸಿದ ಇತಿಹಾಸಕ್ಕ ಸಾಕ್ಷಿಯಾದ ಸೆಂಗೋಲ್‌ ಇನ್ನು ಮುಂದೆ ಸಂಸತ್ತಿನಲ್ಲಿಯೇ ಇರಲಿದೆ.

ಇದನ್ನೂ ಓದಿ: New Parliament Building: ನೂತನ ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿದ ಟಿಎಂಸಿ, ಆಪ್‌; ಕೊಟ್ಟ ಕಾರಣ ಹೀಗಿದೆ

Exit mobile version