ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ರೇಸಿನಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೊರ ಬಿದ್ದ ಬೆನ್ನಲ್ಲೇ, ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಸ್ಪರ್ಧಿಸಲು ಮುಂದಾಗಿದ್ದಾರೆ. ಅವರು ಸೆಪ್ಟೆಂಬರ್ 30ರಂದು ತಮ್ಮ ನಾಮಪತ್ರವನ್ನ ಸಲ್ಲಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಇಷ್ಟಾಗಿಯೂ, ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ದಿಗ್ವಿಜಯ್ ಸಿಂಗ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಕೆ ಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಕೇಳಿ ಬರುತ್ತಿವೆ. ಮತ್ತೊಂದೆಡೆ ತಿರುವನಂಥಪುರ ಸಂಸದ ಶಶಿ ತರೂರ್ ಅವರು ನಾಮಪತ್ರವನ್ನು ಪಡೆದುಕೊಂಡಿದ್ದು, ಶೀಘ್ರವೇ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಏತನ್ಮಧ್ಯೆ, ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಸ್ಪರ್ಧಿಸದಿರಲು ರಾಹುಲ್ ಗಾಂಧಿ ಅವರು ನಿರ್ಧರಿಸಿದ್ದಾರೆ. ರಾಹುಲ್ ಅವರು ಈಗ ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಿರತರಾಗಿದ್ದು, ಶೀಘ್ರವೇ ಈ ಯಾತ್ರೆ ಕೇರಳದಿಂದ ಕರ್ನಾಟಕವನ್ನು ಪ್ರವೇಶಿಸಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ | Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್ 17ಕ್ಕೆ; ಮತ ಎಣಿಕೆ 19ಕ್ಕೆ