Site icon Vistara News

ಪ್ರತ್ಯೇಕ ಅಪಘಾತಗಳ ‘ಸರಣಿ’; 9 ಜನರ ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

Car Accident In Mumbai

Separate Accidents In Uttar Pradesh And Maharashtra; 9 People Died

ಲಖನೌ/ಮುಂಬೈ: ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ (Accidents) 9 ಜನ ಮೃತಪಟ್ಟರೆ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮುಂಬೈನ ಬಾಂದ್ರಾ-ವೊರ್ಲಿ ಸೀ ಲಿಂಕ್‌ ಟೋಲ್‌ ಪ್ಲಾಜಾ ಬಳಿ ಗುರುವಾರ (ನವೆಂಬರ್‌ 9) ರಾತ್ರಿ ಕಾರೊಂದು ಸುಮಾರು ಆರು ಕಾರುಗಳಿಗೆ ಡಿಕ್ಕಿಯಾಗಿದೆ. ಸರಣಿ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತೊಂದೆಡೆ, ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಹೆದ್ದಾರಿ ಬಳಿ ನಿಲ್ಲಿಸಿದ್ದ ಬಸ್‌ಗೆ ಟ್ರಕ್‌ ಡಿಕ್ಕಿಯಾಗಿದ್ದು, 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗೋರಖ್‌ಪುರ-ಖುಷಿ ನಗರ ಹೆದ್ದಾರಿಯ ಜಗದೀಶ್‌ಪುರ ಗ್ರಾಮದ ಬಳಿ ನಿಲ್ಲಿಸಿದ್ದ ಬಸ್‌ಗೆ ವೇಗವಾಗಿ ಬಂದ ಟ್ರಕ್‌ ಡಿಕ್ಕಿಯಾಗಿದೆ. ಇದರಿಂದಾಗಿ ಬಸ್‌ನಲ್ಲಿದ್ದ 6 ಜನ ಮೃತಪಟ್ಟರೆ, 25 ಮಂದಿಗೆ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಎರಡೂ ಅಪಘಾತಗಳು ಗುರುವಾರ ರಾತ್ರಿಯೇ ಸಂಭವಿಸಿವೆ.

ಮುಂಬೈನಲ್ಲಿ ಆಗಿದ್ದೇನು?

“ಗುರುವಾರ ರಾತ್ರಿ 10.15ರ ಸುಮಾರಿಗೆ ವೊರ್ಲಿಯಿಂದ ಬಾಂದ್ರಾ ಕಡೆ ಹೊರಟಿದ್ದ ಕಾರೊಂದು ಟೋಲ್‌ ಪ್ಲಾಜಾಗಿಂತ 100 ಮೀಟರ್‌ ಮೊದಲು ಬೇರೊಂದು ಕಾರಿಗೆ ಡಿಕ್ಕಿಯಾಗಿದೆ. ಆಗ ಸರಣಿ ಅಪಘಾತ ಸಂಭವಿಸಿದ್ದು, ಸುಮಾರು ಆರು ಕಾರುಗಳು ಡಿಕ್ಕಿಯಾಗಿವೆ. ಹಾಗಾಗಿ, ಒಟ್ಟು 9 ಜನ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇವರಲ್ಲಿ ಮೂವರು ಮೃತಪಟ್ಟಿದ್ದಾರೆ. ಆರು ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ಜೋನ್‌ 9 ಡಿಸಿಪಿ ಕೃಷ್ಣಕಾಂತ್‌ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Hit and Run: ಎರಡು ಪ್ರತ್ಯೇಕ ಅಪಘಾತ, ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಬಲಿ

ಉತ್ತರ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು ಹೀಗೆ…

ಗೋರಖ್‌ಪುರದಿಂದ ಪದ್ರೌನಾಗೆ ಬಸ್‌ ಚಲಿಸುತ್ತಿರುವಾಗ ಅದರ ಚಕ್ರವು ಪಂಚರ್‌ ಆಗಿದೆ. ಜಗದೀಶ್ ಪುರ ಬಳಿ ಬಸ್‌ ನಿಲ್ಲಿಸಿದ ಚಾಲಕ, ಬೇರೊಂದು ಬಸ್‌ಗೆ ತೆರಳಲು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ಇದೇ ವೇಳೆ ಬೇರೊಂದು ಬಸ್‌ ಆಗಮಿಸುತ್ತಲೇ ಒಂದಷ್ಟು ಜನ ಆ ಬಸ್‌ ಹತ್ತಿದ್ದಾರೆ. ಇನ್ನೊಂದಿಷ್ಟು ಜನ ಎರಡೂ ಬಸ್‌ಗಳ ಮಧ್ಯೆ ನಿಂತಿದ್ದಾರೆ. ಆಗ ವೇಗವಾಗಿ ಬಂದ ಟ್ರಕ್‌ ಬಸ್‌ಗೆ ಗುದ್ದಿದೆ. ಆಗ ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Exit mobile version