ಪಾಟ್ನಾ: ಇತ್ತೀಚೆಗೆ ಬಿಹಾರದ ಸಾದರ್ ಆಸ್ಪತ್ರೆ ಆವರಣದಲ್ಲಿ ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ, ಯುವಕನೊಬ್ಬ ಬಲವಂತದಿಂದ ಚುಂಬಿಸಿ, ಓಡಿಹೋಗಿದ್ದ ಘಟನೆ ನಡೆದಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವನ ಹೆಸರು ಮೊಹಮ್ಮದ್ ಅಕ್ರಮ್ ಎಂದು ಗೊತ್ತಾಗಿದೆ. ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಕಳ್ಳತನ ಮಾಡುವ ಗ್ಯಾಂಗ್ನ ಮುಖ್ಯಸ್ಥ ಈತ ಎಂದು ಪೊಲೀಸರು ಹೇಳಿದ್ದಾರೆ. ಮೊಹಮ್ಮದ್ ಅಕ್ರಮ್ನೊಂದಿಗೆ, ಅವನ ಗ್ಯಾಂಗ್ನ ಇನ್ನೂ ನಾಲ್ವರನ್ನು ಬಂಧಿಸಿದ್ದಾರೆ.
ಅಕ್ರಮ್ ಮತ್ತು ಅವನ ಗ್ಯಾಂಗ್ ಹಲವು ತಿಂಗಳುಗಳಿಂದಲೂ ಬಿಹಾರದ ಜಮುಯಿ ಜಿಲ್ಲೆ ಮತ್ತು ಇತರ ಹಲವು ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಈಗಾಗಲೇ ಅನೇಕ ಮಹಿಳೆಯರಿಗೆ ಈತ ಹೀಗೆ ಮುತ್ತಿಟ್ಟಿದ್ದಾನೆ. ಅಷ್ಟೇ ಅಲ್ಲ, ಸರಗಳ್ಳತನವನ್ನೂ ಇವರು ಮಾಡುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಹೆಣ್ಮಕ್ಕಳು/ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರ್ಚ್ 13ರಂದು ಮಹಿಳೆಗೆ ಈತ ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಆ ಮಹಿಳೆ ಬಿಹಾರದ ಸಾದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದವರು, ಅಲ್ಲೇ ಆಸ್ಪತ್ರೆ ಆವರಣದಲ್ಲಿ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದರು. ಹಿಂಬದಿಯಿಂದ ಬಂದ ಈತ ಏಕಾಏಕಿ ಆಕೆಯನ್ನು ತಬ್ಬಿಕೊಂಡು ಬಲವಂತದಿಂದ ಅವರ ಬಾಯಿಗೆ ಮುತ್ತುಕೊಟ್ಟಿದ್ದ. ಮಹಿಳೆ 2015ರಿಂದಲೂ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಈ ವ್ಯಕ್ತಿ ಯಾರೆಂದು ತನಗೆ ಗೊತ್ತಿಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಕೆಲವು ಪ್ರಮುಖ ಮಾಧ್ಯಮಗಳಲ್ಲಿ ಕೂಡ ಸುದ್ದಿ ವರದಿಯಾಗಿತ್ತು. ಮೊಹಮ್ಮದ್ ಅಕ್ರಮ್ ಮಾರ್ಚ್ 10ಕ್ಕೂ ಪೂರ್ವ ಹಲವು ಮಹಿಳೆಯರಿಗೆ ಹೀಗೆ ಕಿಸ್ ಕೊಟ್ಟಿದ್ದಾನೆ ಎಂದೂ ಹೇಳಲಾಗಿತ್ತು. ಆರೋಗ್ಯ ಕಾರ್ಯಕರ್ತೆಯ ದೂರು ಮತ್ತು ಮಾಧ್ಯಮಗಳ ವರದಿ ಆಧರಿಸಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಘಟನೆ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆರೋಗ್ಯ ಕಾರ್ಯಕರ್ತೆ, ’ಆತ ನನಗೆ ಅಪರಿಚಿತ. ಒಮ್ಮೆಲೇ ಹಿಂದಿನಿಂದ ಬಂದು ನನ್ನನ್ನು ಅಪ್ಪಿದ ಮತ್ತು ಬಾಯಿಗೆ ಮುತ್ತುಕೊಟ್ಟ. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ, ಆದರೆ ಆಗಲಿಲ್ಲ. ಮುತ್ತು ಕೊಟ್ಟು ಅವನು ಓಡಿಯೇ ಹೋದ. ಅವನ್ಯಾಕೆ ಬಂದ? ಯಾಕೆ ಚುಂಬಿಸಿದ? ನನಗೇನೂ ಗೊತ್ತಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ನಾನು ಜೋರಾಗಿ ಕೂಗಿಕೊಂಡೆ. ಸಹಾಯಕ್ಕಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಕರೆದೆ. ಆದರೆ ಕಾಂಪೌಂಡ್ ಸಣ್ಣ ಇರುವುದರಿಂದ ಅವನಿಗೆ ತಪ್ಪಿಸಿಕೊಳ್ಳಲು ಸುಲಭವಾಯಿತು’ ಎಂದೂ ತಿಳಿಸಿದ್ದಾರೆ.