Site icon Vistara News

Air India: ವಿಮಾನದಲ್ಲಿ ‘ವೆಜ್‌’ ಪ್ಯಾಸೆಂಜರ್‌ ಊಟದಲ್ಲಿ ಸಿಕ್ಕ ಮೂಳೆಗಳು; ಮುಂದೇನಾಯ್ತು?

Air India Food

Served veg meal with chicken pieces; Air India passenger demands action

ತಿರುವನಂತಪುರಂ: ಸಹ ಪ್ರಯಾಣಿಕರ ಜತೆ ಅನುಚಿತ ವರ್ತನೆ, ಸಿಬ್ಬಂದಿ ಜತೆ ಜಗಳ, ಬೈಗಳು, ಬೇರೆಯವರ ಮೇಲೆ ಮೂತ್ರ ವಿಸರ್ಜನೆ ಸೇರಿ ಹಲವು ಅಪಸವ್ಯಗಳಿಂದಾಗಿ ಇತ್ತೀಚೆಗೆ ಏರ್‌ ಇಂಡಿಯಾ (Air India) ವಿಮಾನಗಳು ಸುದ್ದಿಯಾಗುತ್ತಿವೆ. ಇದರ ಬೆನ್ನಲ್ಲೇ, ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಸಸ್ಯಾಹಾರದ (Veg Meal) ಬದಲಿಗೆ ಚಿಕನ್‌ ಪೀಸ್‌ಗಳು ಇರುವ ಊಟ ನೀಡಲಾಗಿದೆ ಎಂದು ಮಹಿಳೆಯೊಬ್ಬರು (Woman Passenger) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಫೋಟೊಗಳ ಸಮೇತ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಏರ್‌ ಇಂಡಿಯಾ 582 ವಿಮಾನದಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಇದೇ ವೇಳೆ ನನಗೆ ನೀಡಿದ ವೆಜ್‌ ಮೀಲ್‌ನಲ್ಲಿ ಚಿಕನ್‌ ಪೀಸ್‌ಗಳು ದೊರೆತಿವೆ. ನಾನು ಕಲ್ಲಿಕೋಟೆಯಿಂದ ವಿಮಾನ ಹತ್ತಿದೆ. ಈ ವಿಮಾನವು 6.40 ಹೊರಡುವ ಬದಲು 7.40ಕ್ಕೆ ಹಾರಾಟ ಆರಂಭಿಸಿದೆ. ವಿಮಾನ ಹಾರಾಟ ವಿಳಂಬ ಮಾಡುವ ಜತೆಗೆ ಮಾಂಸಾಹಾರ ನೀಡಲಾಗಿದೆ. ಇದರ ಕುರಿತು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದರೆ, ಅವರು ಒಂದು ಸಾರಿ ಕೇಳಿ ಸುಮ್ಮನಾದರು. ಹಾಗಾಗಿ, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಆಗ್ರಹಿಸುತ್ತಿದ್ದೇನೆ” ಎಂದು ವೀರಾ ಜೈನ್‌ ಎಂಬ ಮಹಿಳೆಯು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಸೋರುತಿಹುದು ಏರ್‌ ಇಂಡಿಯಾ ವಿಮಾನದ ಮಾಳಿಗೆ; ಪ್ರಯಾಣಿಕರಿಗೋ ಬಚ್ಚಲಲ್ಲಿ ಕುಳಿತ ಅನುಭವ!

“ಮೊದಲು ವಿಮಾನ ವಿಳಂಬವಾಗಿದೆ. ಇದಾದ ನಂತರ ನಾನ್‌ ವೆಜ್‌ ಊಟ ನೀಡಲಾಗಿದೆ. ಇದರಿಂದಾಗಿ ನನ್ನ ಭಾವನೆಗಳಿಗೆ ಧಕ್ಕೆಯಾಗಿದೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಏರ್‌ ಇಂಡಿಯಾ ಪ್ರತಿಕ್ರಿಯಿಸಿದ್ದು, “ದಯಮಾಡಿ ಪೋಸ್ಟ್‌ ಡಿಲೀಟ್‌ ಮಾಡಿ. ಬಹಿರಂಗವಾಗಿ ಹಂಚಿಕೊಂಡಿರುವ ದೂರನ್ನು ಮೆಸೇಜ್‌ ಮೂಲಕ ಕಳುಹಿಸಿ” ಎಂದು ಕೋರಿದೆ. ಇದಾದ ಬಳಿಕವೂ ಪ್ರತಿಕ್ರಿಯಿಸಿದ ಮಹಿಳೆ, “ಡೈರೆಕ್ಟ್‌ ಮೆಸೇಜ್‌ (DM) ಮೂಲಕ ಒಮ್ಮೆ ಕ್ಷಮೆಯಾಚಿಸಲಾಗಿದೆ. ಆದರೆ, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ವಂದೇ ಭಾರತ್‌ ರೈಲಲ್ಲಿ ಹಳಸಿದ ಊಟ ಪೂರೈಕೆ

ಮತ್ತೊಂದೆಡೆ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ಅಕಾಶ್‌ ಕೆಶಾರಿ ಎಂಬ ಪ್ರಯಾಣಿಕರು ತಮಗೆ ಕಳಪೆ ಹಾಗೂ ಹಳಸಿದ ಆಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ಎರಡು ವಿಡಿಯೊಗಳನ್ನೂ ಹಂಚಿಕೊಂಡಿದ್ದಾರೆ. “ನಾನು ದೆಹಲಿಯಿಂದ ವಾರಾಣಸಿ ರೈಲಿನಲ್ಲಿ ಪ್ರಯಾಣಿಸಿದೆ. ರೈಲಿನಲ್ಲಿ ನನಗೆ ಭಾರಿ ಕಳಪೆ ಹಾಗೂ ಹಳಸಿದ ಆಹಾರವನ್ನು ನೀಡಿದ್ದಾರೆ. ದಯಮಾಡಿ ನನ್ನ ಹಣ ರಿಫಂಡ್‌ ಮಾಡಿ. ಈ ವ್ಯಾಪಾರಿಗಳು (Vendors) ವಂದೇ ಭಾರತ್‌ ರೈಲಿನ ಬ್ರ್ಯಾಂಡ್‌ಗೆ ಮಸಿ ಬಳಿಯುತ್ತಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version