Site icon Vistara News

Brijendra Singh: ‘ಒಂದೇ’ ಕಾರಣ ನೀಡಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ ಬಿಜೆಪಿ ಸಂಸದ! ಏನದು?

Brijendra Singh

Setback For BJP In Haryana, Hisar MP Brijendra Singh Switches To Congress

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಮೊದಲೇ ಹರಿಯಾಣದಲ್ಲಿ ಬಿಜೆಪಿಗೆ (Haryana BJP) ಭಾರಿ ಹಿನ್ನಡೆಯಾಗಿದೆ. ಹರಿಯಾಣದ ಹಿಸಾರ್ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್‌ (Brijendra Singh) ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿ ಬ್ರಿಜೇಂದ್ರ ಸಿಂಗ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. “ರಾಜಕೀಯ ಕಾರಣಗಳಿಂದಾಗಿ ಬಿಜೆಪಿ ತೊರೆದಿದ್ದೇನೆ” ಎಂದು ಅವರು ಹೇಳಿದ್ದಾರೆ.

“ಬಲವಾದ ರಾಜಕೀಯ ಕಾರಣಗಳಿಂದಾಗಿ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಹಿಸಾರ್‌ ಸಂಸದನಾಗಿ ಜನರ ಸೇವೆ ಮಾಡಲು ಅವಕಾಶ ಕೊಟ್ಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೃತಜ್ಞತೆಗಳು” ಎಂದು ಎಂದು ಹೇಳಿದ್ದಾರೆ. “2023ರ ಅಕ್ಟೋಬರ್‌ 2ರಂದು ಜಿಂಡ್‌ನಲ್ಲಿ ನಡೆದ ರ‍್ಯಾಲಿಯ ವೇಳೆ ಬಿಜೆಪಿ-ಜೆಜೆಪಿ ಮೈತ್ರಿ ಬಗ್ಗೆ ಒಂದು ವಿಷಯ ಪ್ರಸ್ತಾಪ ಮಾಡಿದ್ದೆ. ಈಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ತೊರೆದಿದ್ದೇನೆ” ಎಂದಷ್ಟೇ ಅವರು ಹೇಳಿದ್ದಾರೆ.

ಬ್ರಿಜೇಂದ್ರ ಸಿಂಗ್‌ ಅವರು ಐಎಎಸ್‌ ಅಧಿಕಾರಿಯಾಗಿದ್ದರು. 21 ವರ್ಷ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದ ಅವರು ರಾಜಕೀಯ ಸೇರಿದ್ದರು. ಇವರು ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿರೇಂದರ್‌ ಸಿಂಗ್‌ ಅವರ ಪುತ್ರ. ಅಷ್ಟೇ ಅಲ್ಲ, ಜಾಟ್‌ ಸಮುದಾಯದ ಪ್ರಭಾವಿ ನಾಯಕ ಛೋಟು ರಾಮ್‌ ಅವರ ಮರಿಮೊಮ್ಮಗ ಆಗಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಸುರೇಶ್‌ ಪಚೌರಿ ಸೇರಿ ಐವರು ನಾಯಕರು ಶನಿವಾರ (ಮಾರ್ಚ್‌ 9) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾದಂತಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುರೇಶ್‌ ಪಚೌರಿ, ಮಾಜಿ ಸಂಸದ ಗಜೇಂದ್ರ ಸಿಂಗ್‌ ರಾಜುಖೇಡಿ, ಮಾಜಿ ಶಾಸಕ ಸಂಜಯ್‌ ಶುಕ್ಲಾ ಸೇರಿ ಐವರು ನಾಯಕರು ಬಿಜೆಪಿ ಸೇರ್ಪಡೆಯಾದರು.

ಇದನ್ನೂ ಓದಿ: Lok Sabha Election 2024: ಬಿಜೆಪಿ-ಜೆಡಿಎಸ್‌ ಅಪವಿತ್ರ ಮೈತ್ರಿ; ಡಿ.ಕೆ. ಸುರೇಶ್‌ ಗೆಲುವು 100 ಪರ್ಸೆಂಟ್ ಖಚಿತ:‌ ಸಿದ್ದರಾಮಯ್ಯ

ಕೆಲ ದಿನಗಳ ಹಿಂದಷ್ಟೇ ಜಾರ್ಖಂಡ್‌ನ ಏಕೈಕ ಕಾಂಗ್ರೆಸ್‌ ಸಂಸದೆ ಗೀತಾ ಕೋಡಾ ಅವರು ಕೂಡ ಬಿಜೆಪಿ ಸೇರ್ಪಡೆಯಾಗಿದ್ದರು. ಗೀತಾ ಕೋಡಾ ಅವರು ಮಾಜಿ ಮುಖ್ಯಮಂತ್ರಿ ಮಧು ಕೋಡಾ ಪುತ್ರಿಯಾಗಿದ್ದಾರೆ. ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ್ದ ಅವರು, “ಕಾಂಗ್ರೆಸ್‌ ದೇಶವನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್‌ ಬರೀ ಓಲೈಕೆಯ ರಾಜಕಾರಣ ಮಾಡುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದಾಗಿ ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ಆದರೆ, ಒಂದು ಕುಟುಂಬದ ಹೊರತಾಗಿ ಬೇರೆಯವರಿಗೆ ಅಲ್ಲಿ ಆಸ್ಪದ ಇಲ್ಲ. ಹಾಗಾಗಿ, ಕಾಂಗ್ರೆಸ್‌ನಲ್ಲಿ ಇರುವುದು ಒಳ್ಳೆಯದಲ್ಲ ಎಂದು ಭಾವಿಸಿ ಬಿಜೆಪಿ ಸೇರ್ಪಡೆಯಾದೆ” ಎಂದು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version