ನವದೆಹಲಿ: ಕಾಂಗ್ರೆಸ್ ಪಕ್ಷವು (Congress Party) ನಡೆಸುತ್ತಿರುವ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ವ್ಯವಹಾರಗಳ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL- Associated Journals Limited) ಮತ್ತು ಯಂಗ್ ಇಂಡಿಯನ್(Young Indian – YI)ಗೆ ಸೇರಿದ 751 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate – ED)) ಜಪ್ತಿ ಮಾಡಿದೆ ಎಂದು ಸಂಸ್ಥೆ ಮಂಗಳವಾರ ತಿಳಿಸಿದೆ.
ಎಜೆಎಲ್‌ಗೆ ಸೇರಿದ ದಿಲ್ಲಿ, ಮುಂಬೈ ಮತ್ತು ಲಖನೌ ನಗರಗಳಲ್ಲಿ 661 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಯಂಗ್ ಇಂಡಿಯನ್‌ನ ಅಪರಾಧದ ಆದಾಯವನ್ನು ಈಕ್ವಿಟಿ ಷೇರುಗಳ ರೂಪದಲ್ಲಿ ಉಳಿದ ಮೊತ್ತವನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 751.9 ಕೋಟಿ ರೂಪಾಯಿ ಆಸ್ತಿ ಜಪ್ತಿ ಸಂಬಂಧ ಜಾರಿ ನಿರ್ದೇಶನಾಲಯವು ಆದೇಶವನ್ನು ಹೊರಡಿಸಿತ್ತು. ತನಿಖೆಯ ಪ್ರಕಾರ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ದಿಲ್ಲಿ, ಮುಂಬೈ ಮತ್ತು ಲಕ್ನೋದಂತಹ ಭಾರತದ ಅನೇಕ ನಗರಗಳಲ್ಲಿ ಹರಡಿರುವ 661.69 ಕೋಟಿ ರೂ. ಮೌಲ್ಯ ಸ್ಥಿರ ಆಸ್ತಿಗಳನ್ನು ಹೊಂದಿದೆ. ಮತ್ತು ಯಂಗ್ ಇಂಡಿಯನ್ ಕಂಪನಿಯು ಸುಮಾರು 90.21 ಕೋಟಿ ರೂ. ಮೌಲ್ಯದ ಅಪರಾಧ ಆದಾಯವನ್ನು ಷೇರುಗಳಲ್ಲಿ ತೊಡಗಿಸಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2014ರ ಜೂನ್ 26ರಂದು ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆಗೆ ಆದೇಶಿಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನ್ಯಾಷನಲ್ ಹೆರಾಲ್ಡ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಸ್ವೀಕರಿಸಿ, ಕೋರ್ಟ್ ತನಿಖೆಗೆ ಸೂಚಿಸಿತ್ತು.
ಎಜೆಎಲ್‌ಗೆ ಪತ್ರಿಕೆಗಳನ್ನು ಪ್ರಕಟಿಸುವ ಉದ್ದೇಶಕ್ಕಾಗಿ ಭಾರತದ ವಿವಿಧ ನಗರಗಳಲ್ಲಿ ರಿಯಾಯಿತಿ ದರದಲ್ಲಿ ಭೂಮಿಯನ್ನು ನೀಡಲಾಯಿತು. ಆದರೆ, 2008ರಲ್ಲಿ ತನ್ನ ಪ್ರಕಾಶನ ಕಾರ್ಯಾಚರಣೆಗಳನ್ನು ಮುಚ್ಚಿತು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಆಸ್ತಿಗಳನ್ನು ಬಳಸಲಾರಂಭಿಸಿತು. ಹಾಗೆಯೇ, ಎಜಿಎಲ್ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (AICC) 90.21 ಕೋಟಿ ಸಾಲವನ್ನು ಮರುಪಾವತಿ ಮಾಡಬೇಕಾಗಿತ್ತು. ಆದರೆ ಎಐಸಿಸಿ 90.21 ಕೋಟಿ ಸಾಲವನ್ನು ಎಜಿಎಲ್‌ನಿಂದ ವಸೂಲಿ ಮಾಡಲಾಗದ ಸಾಲ ಎಂದು ಪರಿಗಣಿಸಿತು ಮತ್ತು ಅದನ್ನು ಹೊಸದಾಗಿ ಆರಂಭಿಸಿದ ಯಂಗ್ ಇಂಡಿಯನ್ ಕಂಪನಿಗೆ 50 ಲಕ್ಷಕ್ಕೆ ಮಾರಾಟ ಮಾಡಿತು. ಆದರೆ, ಯಾವುದೇ ಆದಾಯ ಮೂಲವಿಲ್ಲದೇ ಮೂಲವಿಲ್ಲದ ಯಂಗ್ ಇಂಡಿಯನ್ ಕಂಪನಿಯ 50 ಲಕ್ಷ ರೂ. ಪಾವಿತಿಸಲು ಸಾಧ್ಯವಿರಲಿಲ್ಲ ಎಂದು ಇ ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: National Herald Case: ದೆಹಲಿಯಲ್ಲಿ ನ್ಯಾಷನಲ್ ಹೆರಾಲ್ಡ್ ಕಚೇರಿ ಸೀಲ್ ಮಾಡಿದ ಇಡಿ ಅಧಿಕಾರಿಗಳು