ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಮೊದಲೇ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ. ರಾಜ್ಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ (Kiran Kumar Reddy) ಅವರು ಭಾನುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಕಿರಣ್ ಕುಮಾರ್ ರೆಡ್ಡಿ, “ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ದಯಮಾಡಿ ಅಂಗೀಕರಿಸಿ” ಎಂದು ಕೋರಿದ್ದಾರೆ. 2010ರಲ್ಲಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಕಾರ ವಹಿಸಿಕೊಂಡ ಅವರು ಆಂಧ್ರಪ್ರದೇಶದ ವಿಭಜನೆ ವಿರೋಧಿಸಿ 2014ರಲ್ಲಿ ರಾಜೀನಾಮೆ ನೀಡಿದ್ದರು. ಇವರು ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದಾರೆ.
ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ಪತ್ರ
ಪಕ್ಷದ ಆಂತರಿಕ ಚಟುವಟಿಕೆಗಳಿಂದ ಬೇಸತ್ತು ಕಿರಣ್ ಕುಮಾರ್ ರೆಡ್ಡಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶೀಘ್ರದಲ್ಲೇ ಅವರು ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಕಮಲ ಪಾಳಯ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Gujarat Election | ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಕಮಲ ಮುಡಿದ ಗುಜರಾತ್‌ನ ಪ್ರಮುಖ ನಾಯಕ