ಹೈದರಾಬಾದ್: ಟಿಆರ್‌ಎಸ್ ಶಾಸಕರ ಖರೀದಿ ಪ್ರಯತ್ನ ಪ್ರಕರಣದ ( B L Santosh ) ತನಿಖೆ ನಡೆಸುತ್ತಿರುವ ತೆಲಂಗಾಣ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಹಿನ್ನಡೆಯಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಹೆಸರಿಸಲು ಹೈದ್ರಾಬಾದ್ ಎಸಿಬಿ ಕೋರ್ಟ್ ನಿರಾಕರಿಸಿದೆ. ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೀಡಿದ್ದ ನೋಟಿಸ್ ಅನ್ನು ಎಸಿಬಿ ಕೋರ್ಟ್ ರದ್ದು ಮಾಡಿದೆ. ಬಹುಶಃ ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ತೆಲಂಗಾಣ ಸರ್ಕಾರವು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಏತನ್ಮಧ್ಯೆ, ಇದೇ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿದ್ದ ಸಿಂಹಯಾಜಿ ಸ್ವಾಮೀಜಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿದ್ದು, ಜೈಲಿನಿಂದ ಹೊರ ಬಂದಿದ್ದಾರೆ.
ಟಿಆರ್‌ಎಸ್ ಶಾಸಕರ ಖರೀದಿ ಪ್ರಯತ್ನ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಜಗ್ಗು ಸ್ವಾಮಿ ಮತ್ತು ಬುಸರಾಪು ಶ್ರೀನಿವಾಸ್ ಎಂಬುವವರ ವಿರುದ್ಧ ನೋಟಿಸ್ ನೀಡಿದ್ದ ಎಸ್ಐಟಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಮೂವರ ಜತೆಗೆ, ರಾಮಚಂದ್ರ ಭಾರತಿ, ಕೋರೆ ನಂದಕುಮಾರ್ ಮತ್ತು ಡಿಪಿಎಸ್‌ಕೆವಿಎನ್ ಸಿಂಹಾಜಿ ಅವರನ್ನೂ ಹೆಸರಿಸಲಾಗಿತ್ತು.
ಬಿ.ಎಲ್.ಸಂತೋಷ್ ಅವರಿಗೆ ನೀಡಿದ ನೋಟಿಸ್ ರದ್ದು ಮಾಡಿದ ಎಸಿಬಿ ಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿ ಪೊಲೀಸರದ್ದಾಗಿದೆ. ಹಾಗಾಗಿ, ಈ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಆರೋಪಿಗೆ ಹಾಜರಾಗುವಂತೆ ಕೋರುವ ಅಧಿಕಾರ ಎಸ್ಐಟಿಗೆ ಇಲ್ಲ ಎಂದು ಹೇಳಿದೆ. ನೋಟಿಸ್ ರದ್ದು ಮಾಡಿದ ಎಸಿಬಿ ಕೋರ್ಟ್ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಎಸ್ಐಟಿ ಹೇಳಿಕೊಂಡಿದೆ.