ಹೊಸದಿಲ್ಲಿ: ಸೆಪ್ಟೆಂಬರ್ 17ರಂದು ಇರುವ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) 73ನೇ ಹುಟ್ಟುಹಬ್ಬದ (PM Narendra Modi birthday) ಅಂಗವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ದೇಶಾದ್ಯಂತ 16 ದಿನಗಳ `ಸೇವಾ ಹಿ ಸಂಘಟನೆ’ (Seva hi sanghatan) ಅನ್ನು ಆಯೋಜಿಸಲಿದೆ. ಈ ಕಾರ್ಯಕ್ರಮವು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮುಕ್ತಾಯಗೊಳ್ಳಲಿದೆ.
“ಸೆಪ್ಟೆಂಬರ್ 17ರಂದು ಪ್ರಧಾನಿಯವರ ಜನ್ಮದಿನದಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯ (Gandhi jayanthi) ವರೆಗೆ ‘ಸೇವಾ ಪಖ್ವಾರ’ದ (Seva pakhwara – ಸೇವಾ ಪಾಕ್ಷಿಕ) ಭಾಗವಾಗಿ 16 ದಿನಗಳ ‘ಸೇವಾ ಹಿ ಸಂಘಟನೆ’ ಕಾರ್ಯಕ್ರಮವನ್ನು ಬಿಜೆಪಿ ನಡೆಸಲಿದೆʼʼ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್, ವಿನೋದ್ ತಾವ್ಡೆ, ಸುನೀಲ್ ಬನ್ಸಾಲ್, ಸಂಜಯ್ ಬಂಡಿ ಮತ್ತು ಕೈಲಾಶ್ ವಿಜಯವರ್ಗಿಯಾ ಅವರು ಪ್ರಧಾನಿಯವರ ಜನ್ಮದಿನದ ಸಿದ್ಧತೆಗೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಪಕ್ಷದ ನಾಯಕರು ‘ಮೇರಿ ಮತಿ ಮೇರಾ ದೇಶ್’ ಮತ್ತು ಇತರ ಭವಿಷ್ಯದ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
ಕಳೆದ ವರ್ಷ ಬಿಜೆಪಿ ಪ್ರಧಾನಿಯವರ ಜನ್ಮದಿನದಿಂದ ಮಹಾತ್ಮ ಗಾಂಧಿಯವರ ಜನ್ಮದಿನದವರೆಗೆ ʼಸೇವಾ ಪಖ್ವಾರ’ವನ್ನು ಆಯೋಜಿಸಿತ್ತು. ಪ್ರಧಾನಮಂತ್ರಿ ಮೋದಿಯವರ ಕುರಿತು ಜಿಲ್ಲಾ ಮಟ್ಟದಲ್ಲಿ ಪ್ರದರ್ಶನಗಳು ನಡೆದಿದ್ದವು. ಇದಲ್ಲದೆ ದೀನದಯಾಳ್ ಉಪಾಧ್ಯಾಯ ಅವರ ಜಯಂತಿ (ಸೆಪ್ಟೆಂಬರ್ 25) ಮತ್ತು ಅಕ್ಟೋಬರ್ 2ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಸಹ ʼಸೇವಾ ಪಖ್ವಾರ’ ಅಡಿಯಲ್ಲಿ ಆಚರಿಸಲಾಗುತ್ತದೆ.