ರಾಯ್‌ಪುರ: ದೇಶದಲ್ಲಿ ಮಾವೋವಾದಿಗಳನ್ನು (Naxalites) ನಿಗ್ರಹಿಸಲು ಪಣ ತೊಟ್ಟಿರುವ ಭದ್ರತಾ ಸಿಬ್ಬಂದಿಯು (Security Forces) ಪ್ರಸಕ್ತ ವರ್ಷದಲ್ಲಿ ಸಾಲು ಸಾಲಾಗಿ ಎನ್‌ಕೌಂಟರ್ ಮಾಡುತ್ತಿದ್ದಾರೆ. ಛತ್ತೀಸ್‌ಗಢ, ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವೆಡೆ ಕಾರ್ಯಾಚರಣೆ ಮೂಲಕ ಹತ್ಯೆಗೈಯುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಛತ್ತೀಸ್‌ಗಢದಲ್ಲಿ (Chhattisgarh) 7 ಉಗ್ರರನ್ನು ಭದ್ರತಾ ಸಿಬ್ಬಂದಿಯು (Security Forces) ಗುರುವಾರ (ಮೇ 23) ಎನ್‌ಕೌಂಟರ್ ಮಾಡಿದ್ದಾರೆ. ಇದರೊಂದಿಗೆ ಭಧ್ರತಾ ಸಿಬ್ಬಂದಿಯು ಪ್ರಸಕ್ತ ವರ್ಷದಲ್ಲಿಯೇ 107 ಮಾವೋವಾದಿಗಳನ್ನು ಹತ್ಯೆ ಮಾಡಿದಂತಾಗಿದೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಾಚರಣೆ ಆರಂಭವಾಗಿದ್ದು, ಇದಾದ ಕೆಲ ಹೊತ್ತಿನಲ್ಲಿ ನಕ್ಸಲರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಬಿಜಾಪುರ ಹಾಗೂ ನಾರಾಯಣಪುರ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮುನ್ನಡೆ ಸಾಧಿಸಿದ ಭದ್ರತಾ ಸಿಬ್ಬಂದಿಯು ಏಳು ಉಗ್ರರನ್ನು ಹತ್ಯೆಗೈದಿದ್ದಾರೆ. ಇನ್ನೂ ಕಾರ್ಯಾಚರಣೆ ಮುಂದುವರಿದಿದೆ” ಎಂದು ನಾರಾಯಣಪುರ ಎಸ್‌ಪಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
Chhattisgarh: Seven Naxalites killed in an encounter with security personnel in the border area of Narayanpur, Bijapur district: Police
— ANI (@ANI) May 23, 2024
5 ತಿಂಗಳಲ್ಲಿ 107 ನಕ್ಸಲರ ಖತಂ
ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಶುಕ್ರವಾರ ಹತ್ಯೆಗೈದ 12 ನಕ್ಸಲರು ಸೇರಿ ಪ್ರಸಕ್ತ ವರ್ಷದ ಐದು ತಿಂಗಳಲ್ಲಿ 107 ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿದ್ದರು. ಲೋಕಸಭೆ ಚುನಾವಣೆಗೆ ವೇಳೆಯೇ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೇ 13ರಂದು ಮಹಾರಾಷ್ಟ್ರದಲ್ಲಿ ಮೂವರು ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದರು. ಗಡ್ಚಿರೋಲಿ ಜಿಲ್ಲೆಯ ಕಟ್ರಂಗಟ್ಟ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವ ಕುರಿತು ಗುಪ್ತಚರ ಮೂಲಗಳಿಂದ ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದರು. ಭಾರಿ ಪ್ರಮಾಣದ ದಾಳಿ, ಅಕ್ರಮ ಚಟುವಟಿಕೆಗೆ ಯೋಜನೆ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಲೇ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದರು.
ಇದನ್ನೂ ಓದಿ: Naxals in Karnataka : ಕುಕ್ಕೆ ಸುಬ್ರಹ್ಮಣ್ಯ ಸಮೀಪ ಮತ್ತೆ ಕಾಣಿಸಿಕೊಂಡ ನಕ್ಸಲರು