Site icon Vistara News

Jamtara Train Accident: ಜಾರ್ಖಂಡ್‌ನಲ್ಲಿ ರೈಲು ಡಿಕ್ಕಿಯಾಗಿ 12 ಜನ ಸಾವು; ಸಿನಿಮೀಯ ದುರಂತ

Jamtara Train Accident

Several People Crushed to Death After Being Hit By Train In Jharkhand's Jamtara

ರಾಂಚಿ: ಜಾರ್ಖಂಡ್‌ನ ಜಮ್ತಾರ ಜಿಲ್ಲೆಯಲ್ಲಿ ಬುಧವಾರ (ಫೆಬ್ರವರಿ 28) ಸಂಜೆ ಭೀಕರ ರೈಲು (Jamtara Train Accident) ದುರಂತ ಸಂಭವಿಸಿದೆ. ಜಮ್ತಾರ ಜಿಲ್ಲೆಯ ಕಲಝಾರಿಯ (Kalajharia) ರೈಲು ನಿಲ್ದಾಣದ ಬಳಿ ರೈಲು (Train Accident) ಡಿಕ್ಕಿಯಾಗಿದೆ. ಸ್ಥಳದಲ್ಲೇ 12 ಮಂದಿ ಮೃತಪಟ್ಟರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯೂ ಕೂಡಲೇ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನೂ ಕೆಲವರನ್ನು ರಕ್ಷಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಸಿನಿಮೀಯ ರೀತಿಯಲ್ಲಿ ರೈಲು ಅಪಘಾತ ಸಂಭವಿಸಿದೆ. ಭಾಗಲ್ಪುರಕ್ಕೆ ತೆರಳುತ್ತಿದ್ದ ಆಂಗ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಹರಡಿದೆ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆತಂಕದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದಾರೆ. ಆದರೆ, ದುರದೃಷ್ಟವಶಾತ್‌, ಮತ್ತೊಂದು ಕಡೆಯಿಂದ ಬರುತ್ತಿದ್ದ ಝಾಝಾ-ಅಸನೋಲ್‌ ರೈಲು ಅವರಿಗೆ ಡಿಕ್ಕಿಯಾಗಿದೆ. ಝಾಝಾ ಅಸನೋಲ್‌ ರೈಲು ವೇಗವಾಗಿ ಚಲಿಸುತ್ತಿದ್ದ ಕಾರಣ ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ರೈಲು ಡಿಕ್ಕಿಯಾದ ರಭಸಕ್ಕೆ 12 ಜನರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಾರು ಜನ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. “ಕಲಝಾರಿಯಾ ರೈಲು ನಿಲ್ದಾಣದ ಬಳಿ ರೈಲೊಂದು ಪ್ರಯಾಣಿಕರ ಮೇಲೆ ಹರಿದಿದೆ. ಕತ್ತಲು ಇದ್ದರೂ ರೈಲ್ವೆ ಸಿಬ್ಬಂದಿಯು ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದುವರೆಗೆ 12 ಜನ ಮೃತಪಟ್ಟಿರುವ ಶಂಕೆ ಇದೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯವಾಗಿದೆ. ಸಾವಿನ ಸಂಖ್ಯೆ ಇಷ್ಟೇ ಎಂದು ಈಗಲೇ ಹೇಳಲು ಆಗುವುದಿಲ್ಲ” ಎಂದು ಜಮ್ತಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ‌ ಮೂಲ ಕಾರಣ ಬಹಿರಂಗ

ಅಪಘಾತ ಸಂಭವಿಸುತ್ತಲೇ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಳಿಗಳ ಮೇಲೆ ಬಿದ್ದ ಶವಗಳನ್ನು, ಗಾಯಾಳುಗಳನ್ನು ರಕ್ಷಿಸಲು ಸುತ್ತಮುತ್ತಲಿನ ನಾಗರಿಕರು ಕೂಡ ನೆರವು ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version