ನವದೆಹಲಿ: 10ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿದ ಮದರಸದ ಶಿಕ್ಷಕರೊಬ್ಬರನ್ನು (Madrasa Teacher) ಪೊಲೀಸರು ಬಂಧಿಸಿರುವ ಪ್ರಕರಣವು ಗುಜರಾತ್‌ನ (Gujarat) ಜುನಾಗಢ ಜಿಲ್ಲೆಯಲ್ಲಿ (Junagadh district) ನಡೆದಿದೆ. ಟೀಚರ್ ಜತೆಗೆ, ಮದರಸದ ಟ್ರಸ್ಟಿಯೊಬ್ಬರನ್ನೂ (Madrasa Trustee) ಕೂಡ ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯ (Sodomising) ಕುರಿತು ಮಕ್ಕಳು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಆರೋಪದ ಹಿನ್ನೆಲೆಯಲ್ಲಿ 55 ವರ್ಷದ ಟ್ರಸ್ಟಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ(Gujarat Police).
17 ವರ್ಷದ ಬಾಲಕನ ದೂರಿನ ಮೇರೆಗೆ ಮಂಗ್ರೋಲ್ ಪೊಲೀಸರು, ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಸಂಭೋಗ), 323 (ಹಲ್ಲೆ), 506-2 (ಕ್ರಿಮಿನಲ್ ಬೆದರಿಕೆ) ಹಾಗೂ ಪೋಕ್ಸೋ ಕಾಯ್ದೆಯಡಿ ಭಾನುವಾರ ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ, ಆರೋಪಿ ಶಿಕ್ಷಕನನ್ನು ಸೂರತ್‌ನಲ್ಲಿರುವ ಆತನ ಅಡಗುತಾಣದಿಂದ ಬಂಧಿಸಲಾಗಿದ್ದು, ಪರಾರಿಯಾಗಿದ್ದ ಮದರಸಾದ ಟ್ರಸ್ಟಿಯನ್ನು ಭಾನುವಾರ ಜುನಾಗಢದಿಂದ ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Sexual Assault Case: ಮಹಿಳಾ ಭಕ್ತರ ಮೇಲೆ ಲೈಂಗಿಕ ದೌರ್ಜನ್ಯ, ಸ್ವಘೋಷಿತ ದೇವಮಾನವ ಅಂದರ್!
ಮಂಗ್ರೋಲ್-ವೆರಾವಲ್ ಬೈಪಾಸ್‌ನಲ್ಲಿರುವ ವಸತಿ ಶಾಲೆಯಲ್ಲಿ ಓದುತ್ತಿರುವ ಬಾಲಕನೊಬ್ಬ ಮತ್ತೊಬ್ಬ ಮೌಲಾನಾ ಫೋನ್ ಬಳಸಿ ತನ್ನ ತಾಯಿಯನ್ನು ಸಂಪರ್ಕಿಸಿ, ಆರೋಪಿ ಶಿಕ್ಷಕ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಬಗ್ಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಹುಡುಗನ ತಾಯಿ ಬಳಿಕ ಪೊಲೀಸರನ್ನು ಸಂಪರ್ಕಿಸಿದರು ಮತ್ತು ಶಾಲೆಯಲ್ಲಿ ವಾಸಿಸುವ ವಿದ್ಯಾರ್ಥಿಗಳನ್ನು ಲೈಂಗಿಕ ದೌರ್ಜನ್ಯ ಮತ್ತು ಗುದಸಂಭೋಗದಲ್ಲಿ ಶಿಕ್ಷಕ ತೊಡಗಿಸಿಕೊಂಡಿರುವ ಬಗ್ಗೆ ಅವರಿಗೆ ತಿಳಿಸಿದರು ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಕೆಲವು ಮುಸ್ಲಿಮ್ ಮುಖಂಡರೊಂದಿಗೆ ಮದರಸಕ್ಕೆ ತೆರಳಿದರು. ಅಲ್ಲಿ ಕೆಲವು ವಿದ್ಯಾರ್ಥಿಗಳನ್ನು ತಮ್ಮ ವಿಶ್ವಾಸಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಈ ವೇಳೆ, ಕೆಲವು ವಿದ್ಯಾರ್ಥಿಗಳು ಶಿಕ್ಷಕನ ಗುದ ಸಂಭೋಗ ನಡೆಸುತ್ತಿದ್ದ ಕುರಿತು ತಿಳಿಸಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗೆ ತಿಳಿಸಿದರೆ ಕೊಲ್ಲುವ ಬೆದರಿಕೆಯನ್ನು ಶಿಕ್ಷಕ ಹಾಕಿದ್ದರು ಎಂಬ ಮಾಹಿತಿಯನ್ನು ನೀಡಿದ್ದಾರೆ.
ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ಮದರಸದ ಟ್ರಸ್ಟಿಗೆ ದೂರು ನೀಡಿದ್ದಾರೆ. ಆದರೂ, ಶಿಕ್ಷಕನ ವಿರುದ್ಧ ಟ್ರಸ್ಟಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂಬ ಮಾಹಿತಿಯು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದಾಗ ಪೊಲೀಸರಿಗೆ ಗೊತ್ತಾಗಿದೆ. ವಿಶೇಷ ಎಂದರೆ, ಈ ವಿಷಯ ಗೊತ್ತಾಗುತ್ತಿದ್ದಂತೆ ಮದರಸದಿಂದ ಶಿಕ್ಷಕ ಪಾರಾಗಲು ಟ್ರಸ್ಟಿ ಹೆಲ್ಪ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜುನಾಗಢ ಜಿಲ್ಲಾ ಪೊಲೀಸ್ ಅಧಿಕಾರಿ ಹರ್ಷದ್ ಮೆಹ್ತಾ ಅವರು ಮದರಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಭರವಸೆಯನ್ನು ಅವರು ಮಕ್ಕಳ ಪೋಷಕರಿಗೆ ನೀಡಿದ್ದಾರೆ.