ಮುಂಬೈ: ಬಾಲಿವುಡ್‌ಗೆ ಕೊರೊನಾ ಕಂಟಕ ಎದುರಾಗಿದೆ. ನಟ ಶಾರುಕ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಅವರಿಗೆ ಭಾನುವಾರ ಕೋವಿಡ್-19 ದೃಢಪಟ್ಟಿದ್ದು, ತಮ್ಮ ನೆಚ್ಚಿನ ನಟ, ನಟಿ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಹಾಗೆಯೇ ಶನಿವಾರ ನಟರಾದ ಕಾರ್ತಿಕ್ ಆರ್ಯನ್ ಹಾಗೂ ಆದಿತ್ಯ ತ್ಯಾಗಿ ಅವರಿಗೂ ಕೊರೊನಾ ತಗುಲಿತ್ತು. ಅನೇಕ ಸೆಲೆಬ್ರಿಟಿಗಳಿಗೆ ಸೋಂಕು ತಗುಲಲು ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ ಏರ್ಪಡಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮವೇ ಕಾರಣ ಎನ್ನಲಾಗಿದೆ. ಈ ಅದ್ದೂರಿ ಪಾರ್ಟಿಗೆ ಹಲವು ನಟ, ನಟಿಯರು ಹಾಗೂ ಕಲಾವಿದರೂ ಆಗಮಿಸಿದ್ದರು. ಇವರಲ್ಲಿ ಸುಮಾರು 55 ಮಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಹೀಗಾಗಿ ಕರಣ್ ಜೋಹರ್ ಅವರ ಮನೆಯೇ ಕೊರೊನಾ ಹಾಟ್‌ಸ್ಪಾಟ್ ಆಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಕಿಂಗ್ ಖಾನ್ ಶಾರುಖ್ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ ತಮಿಳುನಾಡು ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ ʼಜವಾನ್ʼ ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿತ್ತು. ಮತ್ತೊಂದೆಡೆ ʼಪಠಾಣ್ʼ ಚಿತ್ರವನ್ನು 2023ರಲ್ಲಿ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ʼಡುಮ್ಕಿʼ ಸಿನಿಮಾ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಕತ್ರಿನಾ ಕೈಫ್ ಕೂಡ ವೆಬ್ ಸಿರೀಸ್ ಜತೆಗೆ ʼಟೈಗರ್-3′ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರು.
ಮುಂಬೈನ ಕೆ-ವೆಸ್ಟ್ ವಾರ್ಡ್‌ನಲ್ಲಿರುವ ಫಿಲ್ಮ್ ಸ್ಟುಡಿಯೋಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಏರ್ಪಡಿಸಬಾರದು, ಒಂದು ಆಯೋಜಿಸಿದರೆ ಪಾರ್ಟಿಯಲ್ಲಿ ಹಾಜರಾಗುವವರ ಮಾಹಿತಿ ನೀಡಬೇಕು ಎಂದು ಮುಂಬೈ ಪಾಲಿಕೆ ಸೂಚಿಸಿದೆ.
ಇದನ್ನೂ ಓದಿ | ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಈ ಐದು ರಾಜ್ಯಗಳದ್ದೇ ಸಿಂಹಪಾಲು