ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಬಂಧನಕ್ಕೀಡಾಗಿದ್ದ ಆರ್ಯನ್ ಖಾನ್‌ನನ್ನು ಬಿಡುಗಡೆಗೊಳಿಸಲು ಶಾರುಖ್ ಖಾನ್ (Shah Rukh Khan) ಅವರು ಎನ್‌ಸಿಬಿ ಮುಂಬೈ ವಲಯ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಜತೆ ಮಾಡಿದ ವಾಟ್ಸ್‌ಆ್ಯಪ್ ಚಾಟ್ ಅಂಶ ಈಗ ಬಹಿರಂಗಗೊಂಡಿದೆ. ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಸುಲಿಗೆ ಪ್ರಕರಣ ದಾಖಲಿಸಿದ ಕಾರಣ ವಾಂಖೆಡೆ ಅವರು ಶಾರುಖ್ ಖಾನ್ ಜತೆ ಮಾಡಿದ ವಾಟ್ಸ್‌ಆ್ಯಪ್ ಚಾಟ್ ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ವಾಟ್ಸ್‌ಆ್ಯಪ್ ಚಾಟ್ ವೇಳೆ, “ನನ್ನ ಮಗನನ್ನು ಜೈಲಿನಿಂದ ಬಿಡಿಸಲು ಸಹಾಯ ಮಾಡಿ ಪ್ಲೀಸ್. ಕಾನೂನಿನ ಚೌಕಟ್ಟಿನಲ್ಲಿಯೇ ನೆರವು ನೀಡಿ” ಎಂದು ಶಾರುಖ್ ಖಾನ್ ಮೆಸೇಜ್ ಮಾಡಿರುವ ಸಂಗತಿ ಬಹಿರಂಗವಾಗಿದೆ.
“ಸಮೀರ್ ವಾಂಖೆಡೆ ಸಾಹೇಬರೇ, ನಾನು ಒಂದು ನಿಮಿಷ ಮಾತನಾಡಬಹುದೇ? ನಾನು ಶಾರುಖ್ ಖಾನ್. ಒಬ್ಬ ಅಧಿಕಾರಿ ಜತೆ ಹೀಗೆ ಮೆಸೇಜ್ ಮಾಡುವುದು ಅಷ್ಟು ಸಮಂಜಸ ಅಲ್ಲ ಎಂದು ಎನಿಸುತ್ತದೆ. ಆದರೆ, ಒಬ್ಬ ತಂದೆಯಾಗಿ ನಾನು ನಿಮ್ಮ ಜತೆ ಮಾತನಾಡಬಹುದೇ” ಎಂದು ಶಾರುಖ್ ಖಾನ್ ಸಮೀರ್ ವಾಂಖೆಡೆ ಅವರಿಗೆ ಮೆಸೇಜ್ ಮಾಡಿದ್ದಾರೆ. ಇದರಿಂದಾಗಿ ಶಾರುಖ್ ಖಾನ್ ಅಷ್ಟು ದೊಡ್ಡ ನಟನಾದರೂ, ಒಬ್ಬ ಅಧಿಕಾರಿ ಮೇಲೆ ಪ್ರಭಾವ ಬೀರಿಲ್ಲ ಎಂಬುದು ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
“ಕಾನೂನು ಚೌಕಟ್ಟಿನ ಒಳಗಡೆಯೇ ನನ್ನ ಮಗನಿಗೆ ಸಹಾಯ ಮಾಡಿ. ಆರ್ಯನ್ ಖಾನ್ ಜೀವನ ಸುಧಾರಿಸುವ ಜವಾಬ್ದಾರಿ ನನ್ನದು. ಅವನನ್ನು ನಾನು ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುತ್ತೇನೆ. ಆದರೆ, ಈಗ ಆತ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ದಯಮಾಡಿ, ಆತನ ಬಿಡುಗಡೆಗೆ ಸಹಾಯ ಮಾಡಿ. ದಯಮಾಡಿ ನನ್ನ ಮಗನ ಜತೆ ಕಠಿಣವಾಗಿ ವರ್ತಿಸದಿರಿ” ಎಂದು ಶಾರುಖ್ ಖಾನ್ ಬೇಡಿಕೊಂಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ನನ್ನು ಬಿಡುಗಡೆ ಮಾಡಲು ಸಮೀರ್ ವಾಂಖೆಡೆ ಅವರು ಶಾರುಖ್ ಖಾನ್ ಅವರಿಂದ 25 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆದರೆ, ಶಾರುಖ್ ಖಾನ್ ಎಲ್ಲಿಯೂ ಲಂಚ ನೀಡುವುದಾಗಿ ಹೇಳಿಲ್ಲ ಎಂಬುದು ಚಾಟ್ ಸ್ಕ್ರೀನ್‌ಶಾಟ್‌ಗಳಿಂದ ಲಭ್ಯವಾಗಿದೆ.
ಇದನ್ನೂ ಓದಿ: Don 3 Movie : ಈಗ ಡಾನ್ ಶಾರುಖ್ ಅಲ್ಲ ರಣವೀರ್! ಸದ್ಯದಲ್ಲೇ ಬರಲಿದೆ ಡಾನ್ 3 ಪ್ರೊಮೋಷನಲ್ ವಿಡಿಯೊ