ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Modi Birthday) ಅವರ ೭೨ನೇ ಜನ್ಮದ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಜಕಾರಣಿಗಳು, ಕ್ರೀಡಾಪಟುಗಳು, ಬಾಲಿವುಡ್ ನಟರು, ಬೇರೆ ದೇಶಗಳ ಪ್ರಧಾನಿ, ಅಧ್ಯಕ್ಷರು ಮೋದಿ ಅವರಿಗೆ ಶುಭ ಕೋರುತ್ತಿದ್ದಾರೆ.
ಅದರಲ್ಲೂ, ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಮೋದಿ ಅವರಿಗೆ ವಿಭಿನ್ನವಾಗಿ ಶುಭಕೋರಿದ್ದು ಜನರ ಗಮನ ಸೆಳೆದಿದೆ. “ಜನ್ಮದಿನದಂದಾದರೂ ಒಂದು ದಿನ ರಜೆ ತೆಗೆದುಕೊಂಡು, ಖುಷಿಯಾಗಿರಿ ಸರ್” ಎಂಬ ಸಲಹೆಯೊಂದಿಗೆ ಶುಭ ಕೋರಿದ್ದು ವಿಶೇಷ ಎನಿಸಿದೆ.
“ದೇಶದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ನೀವು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ನೀವು ಮುಂದಿನ ದಿನಗಳಲ್ಲಿ ಎಲ್ಲ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ. ಹಾಗೆಯೇ, ಒಂದು ದಿನ ರಜೆ ತೆಗೆದುಕೊಂಡು, ಜನ್ಮದಿನವನ್ನು ಎಂಜಾಯ್ ಮಾಡಿ ಸರ್” ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ಕಳೆದ ೨೨ ವರ್ಷದಿಂದ ಮೋದಿ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಶಾರುಖ್ ಟ್ವೀಟ್ ಮಹತ್ವ ಪಡೆದಿದೆ.
ದೊಡ್ಡ ವ್ಯಕ್ತಿ ಎಂದ ಪೀಟರ್ಸನ್
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು ಹಿಂದಿಯಲ್ಲಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಮೋದಿ ಅವರು ಜನ್ಮದಿನದಂದೇ ಎಂಟು ಚೀತಾಗಳನ್ನು ನಮೀಬಿಯಾದಿಂದ ತಂದು, ಕಾಡಿಗೆ ಬಿಟ್ಟ ಹಿನ್ನೆಲೆಯಲ್ಲಿ ಹಾಗೂ ಮೋದಿ ಅವಧಿಯಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡಿದ ಕಾರಣ ಧನ್ಯವಾದ ತಿಳಿಸಿದ್ದಾರೆ.
“ನರೇಂದ್ರ ಮೋದಿ ಅವರು ದೊಡ್ಡ ವ್ಯಕ್ತಿಯಾಗಿದ್ದಾರೆ. ಅದರಲ್ಲೂ, ನೀವು ಇದುವರೆಗೆ ವನ್ಯಜೀವಿಗಳನ್ನು ರಕ್ಷಿಸಲು ಕ್ರಮ ತೆಗೆದುಕೊಂಡಿದ್ದು ನನಗೆ ಇಷ್ಟವಾಯಿತು. ನೀವು ತುಂಬ ಒಳ್ಳೆಯ ವ್ಯಕ್ತಿ. ಉಳಿದ ಸಚಿವರೂ ನಿಮ್ಮನ್ನು ಅನುಸರಿಸಬೇಕು” ಎಂದು ಪೀಟರ್ಸನ್ ಹಿಂದಿಯಲ್ಲಿಯೇ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ದಿಗ್ಗಜರಿಂದ ಶುಭಾಶಯ
ಶಾರುಖ್ ಮಾತ್ರವಲ್ಲ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಕಂಗನಾ ರಾಣಾವತ್, ಅಭಿಷೇಕ್ ಬಚ್ಚನ್, ಆಲಿಯಾ ಭಟ್ ಸೇರಿ ಹಲವರು ಟ್ವೀಟ್ ಮೂಲಕ ಮೋದಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. “ನಿಮಗಿರುವ ದೃಷ್ಟಿಕೋನ, ನಿಮಗಿರುವ ಸಾಮರ್ಥ್ಯ ತುಂಬ ಜನರಿಗೆ ಸ್ಫೂರ್ತಿ ನೀಡುತ್ತದೆ. ನಿಮಗೆ ದೇವರು ಆರೋಗ್ಯ, ಆಯಸ್ಸು ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಪಕ್ಷಾತೀತವಾಗಿ ಶುಭಾಶಯ
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಶಶಿ ತರೂರ್ ಸೇರಿ ಹಲವು ನಾಯಕರು ಪಕ್ಷಾತೀತವಾಗಿ ಪ್ರಧಾನಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ವಿದೇಶಿ ಗಣ್ಯರಿಂದಲೂ ಹಾರೈಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬೌದ್ಧ ಧರ್ಮಗುರು ದಲಾಯಿ ಲಾಮಾ, ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸೇರಿ ಹಲವು ಜಾಗತಿಕ ಗಣ್ಯರು ಮೋದಿ ಅವರಿಗೆ ಶುಭಕೋರಿದ್ದಾರೆ. ದಲಾಯಿ ಲಾಮಾ ಅವರಂತೂ ವಿಶೇಷ ಪತ್ರದ ಮೂಲಕ ಮೋದಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ | Narendra Modi : ತಂದೆ ಕಷ್ಟಕ್ಕೆ ಹೆಗಲು.. ಬಾಲ್ಯದಲ್ಲೇ ಮಾದರಿ ಮೋದಿ!