Site icon Vistara News

ಪ್ರಧಾನಿ ಮೋದಿ ಮನವಿಗೆ ಸ್ಪಂದನೆ; ಸಂಸತ್​ ಭವನದ ವಿಡಿಯೊಕ್ಕೆ ಧ್ವನಿ ಕೊಟ್ಟ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​

Shah Rukh Khan And Akshay kumar Voice Over to New parliament building Video

#image_title

ನೂತನ ಸಂಸತ್​ ಭವನ (New Parliament Building) ಉದ್ಘಾಟನೆಗೆ ಎರಡು ದಿನ ಮೊದಲು ಅಂದರೆ ಮೇ 26ರಂದು ಪ್ರಧಾನಿ ನರೇಂದ್ರ ಮೋದಿಯವರು ಒಂದು ಟ್ವೀಟ್ ಮಾಡಿದ್ದರು. ಭವ್ಯವಾದ ಹೊಸ ಸಂಸತ್ ಭವನದ ವಿಡಿಯೊ (New Parliament Building Inauguration) ಶೇರ್ ಮಾಡಿಕೊಂಡು ದೇಶದ ಜನರಲ್ಲಿ ಒಂದು ವಿಶೇಷ ಮನವಿ ಮಾಡಿದ್ದರು. ‘ನೀವೆಲ್ಲ ಈ ವಿಡಿಯೊವನ್ನು ನಿಮ್ಮದೇ ವೈಸ್​ ಓವರ್​ನೊಂದಿಗೆ ಹಂಚಿಕೊಳ್ಳಿ. ನಾನೂ ರೀಟ್ವೀಟ್ ಮಾಡುತ್ತೇನೆ. #MyParliamentMyPride ಹ್ಯಾಷ್​ಟ್ಯಾಗ್ ಕೊಡಲು ಮರೆಯಬೇಡಿ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಈ ಕರೆಗೆ ಬಾಲಿವುಡ್​ ನಟರಾದ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​, ವಿವಿಧ ಸಚಿವರು, ಪತ್ರಕರ್ತರು, ಬಿಜೆಪಿ ನಾಯಕರ ಸ್ಪಂದಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿ ಹಲವರು ಸಂಸತ್​ ಭವನ, ಭಾರತ, ಲಾಂಛನ ಮತ್ತಿತರ ವಿಷಯಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿ, ನೂತನ ಸಂಸತ್ ಭವನದ ವಿಡಿಯೊ ಹಂಚಿಕೊಂಡಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿಕೊಂಡಿದ್ದಾರೆ.

ಸಂಸತ್​ ಭವನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡ ಶಾರುಖ್​ ಖಾನ್​ ಆ ವಿಡಿಯೊವನ್ನು ಟ್ವೀಟ್ ಮಾಡಿ, ‘ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ, ಮಹಾನ್​ ರಾಷ್ಟ್ರ ಭಾರತದ ನಾಗರಿಕರನ್ನು ಪ್ರತಿನಿಧಿಸುವವರಿಗಾಗಿ ಎಂಥ ಭವ್ಯವಾದ ಮನೆ ನಿರ್ಮಾಣವಾಗಿದೆ ! ಎಂದು ಹೇಳಿದ್ದಾರೆ. ಹಾಗೇ, ಭಾರತಕ್ಕೊಂದು ಹೊಸ ಸಂಸತ್​ ಭವನ ಬೇಕು ಎಂಬ ಹಳೇ ಕನಸು ಸಾಕಾರವಾಯಿತು. ಇದು ಭಾರತದ ವೈಭವ, ಜೈ ಹಿಂದ್​’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಶಾರುಖ್ ಖಾನ್ ಟ್ವೀಟ್​ನ್ನು ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಸಂಸತ್ ಭವನದ ಬಗ್ಗೆ ನೀವು ಅತ್ಯಂತ ಸುಂದರವಾಗಿ ವರ್ಣಿಸಿದ್ದೀರಿ. ಸಂಸತ್ ಭವನವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಬೆಳವಣಿಗೆಯ ಸಂಕೇತ. ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಒಳಗೊಂಡಿದೆ’ ಎಂದು ಹೇಳಿದ್ದಾರೆ.

ಧ್ವನಿಯಾದ ಅಕ್ಷಯ್​ ಕುಮಾರ್

ಬಾಲಿವುಡ್​ನ ಇನ್ನೊಬ್ಬ ಖ್ಯಾತ ನಟ ಅಕ್ಷಯ್ ಕುಮಾರ್ ಅವರೂ ಕೂಡ ಪ್ರಧಾನಿ ನರೇಂದ್ರ ಮೋದಿ ಮನವಿಯನ್ನು ಗೌರವಿಸಿದ್ದಾರೆ. ನೂತನ ಸಂಸತ್​ ಭವನದ ವಿಡಿಯೊಕ್ಕೆ ತಮ್ಮ ಧ್ವನಿ ಕೊಟ್ಟಿದ್ದಾರೆ. ಅಂದರೆ ಭವ್ಯ ಭವನವನ್ನು ಅವರು ವಿವರಿಸಿದ್ದಾರೆ. ವಿಡಿಯೊ ಶೇರ್ ಮಾಡಿಕೊಂಡ ಅಕ್ಷಯ್ ಕುಮಾರ್ ಅವರು ‘ಸಂಸತ್​ ಭವನದ ವೈಭವಯುತ ಕಟ್ಟಡ ನೋಡಲು ಸಿಕ್ಕಾಪಟೆ ಖುಷಿಯಾಗುತ್ತದೆ. ಭಾರತದ ಅಭಿವೃದ್ಧಿ ಎಂಬ ಕಥೆಯಲ್ಲಿ ಒಂದು ಐತಿಹಾಸಿಕ ಗುರುತಾಗಿ ಇದು ಸದಾ ಉಳಿಯಲಿದೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಕ್ಷಯ್ ಕುಮಾರ್ ಅವರ ಟ್ವೀಟ್​ನ್ನು ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ ‘ ನೀವು ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವಿವರಿಸಿದ್ದೀರಿ. ನಮ್ಮ ನೂತನ ಸಂಸತ್ತು, ನಮ್ಮ ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿದೆ. ಇದು ದೇಶದ ಪರಂಪರೆ ಮತ್ತು ಈ ದೇಶದ ಜನರ ಭವಿಷ್ಯಕ್ಕೆ ಪೂರಕವಾದ ಆಕಾಂಕ್ಷೆಗಳಿಗೆ ಸ್ಪಂದನೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.

ತಮಿಳಿಗರಿಗೆ ಹೆಮ್ಮೆ ಎಂದ ನಟ ರಜಿನಿಕಾಂತ್​!

ನಟ ರಜಿನಿಕಾಂತ್​ ಅವರು ಟ್ವೀಟ್ ಮಾಡಿ ಸೆಂಗೋಲ್ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇವರು ವಿಡಿಯೊ ಶೇರ್ ಮಾಡಲಿಲ್ಲ. ‘ತಮಿಳಿಗರ ಸಾಂಪ್ರದಾಯಿಕ ಚಿಹ್ನೆ ರಾಜದಂಡ (ಸೆಂಗೋಲ್​) ಇನ್ನು ಮುಂದೆ ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇರಲಿದೆ. ತಮಿಳಿಗರಿಗೆ ಗೌರವ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದಿದ್ದಾರೆ. ಈ ಟ್ವೀಟ್ ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ತಮಿಳುನಾಡಿನ ವೈಭವೋಪೇತ ಸಂಸ್ಕೃತಿ ಬಗ್ಗೆ ಇಡೀ ರಾಷ್ಟ್ರಕ್ಕೇ ಹೆಮ್ಮೆಯಿದೆ. ಇಂಥ ಮಹಾನ್ ರಾಜ್ಯದ ಸಂಸ್ಕೃತಿಯು ನೂತನ ಸಂಸತ್ ಭವನದೊಳಗೆ ಕಂಗೊಳಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

Exit mobile version