ನವದೆಹಲಿ: ಬೇಹಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಮರಣ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ ಮಾಜಿ ಯೋಧರನ್ನು (Indian Navy Veterans) ಭಾರತಕ್ಕೆ ವಾಪಸ್ ಕರೆ ತರುವಲ್ಲಿ ಕೇಂದ್ರ ಸರ್ಕಾರ (Central Government) ಯಶಸ್ವಿಯಾಗಿದೆ. ಪ್ರಧಾನಿ ಮೋದಿ ಅವರು ವೈಯಕ್ತಿಕ ವರ್ಚಸ್ಸಿನಿಂದಾಗಿಯೇ ಮಾಜಿ ಯೋಧರನ್ನು ರಕ್ಷಿಸಲು ಸಾಧ್ಯವಾಯಿತು ಹೇಳಲಾಗುತ್ತಿದೆ. ಆದರೆ, ಬಿಜೆಪಿಯ ಹಿರಿಯ ನಾಯಕ ಹಾಗೂ ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ (PM Narendra Modi) ಅವರ ಕಡು ಟೀಕಾಕಾರರಾಗಿ ಬದಲಾಗಿರುವ ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರು, ನಟ ಶಾರುಕ್ ಖಾನ್ (Shah Rukh Khan)ಅವರ ಮಧ್ಯಸ್ಥಿಕೆಯಿಂದಾಗಿ ಮಾಜಿ ಯೋಧರ ಬಿಡುಗಡೆಯಾಗಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಯುಎಇ ಮತ್ತು ಕತಾರ್ ಭೇಟಿಯ ಕುರಿತು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ರಿಪ್ಲೈ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ತೀವ್ರ ಟೀಕೆ ಮಾಡಿದ್ದಾರೆ. ಮೋದಿ ಅವರು ಟ್ವೀಟ್ ಮಾಡಿ, ”ಮುಂದಿನ ಎರಡು ದಿನಗಳಲ್ಲಿ, ನಾನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯುಎಇ ಮತ್ತು ಕತಾರ್‌ಗೆ ಭೇಟಿ ನೀಡಲಿದ್ದೇನೆ, ಇದು ಈ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುತ್ತದೆ. ನಾನು ಅಧಿಕಾರ ವಹಿಸಿಕೊಂಡ ಯುಎಇಗೆ ಭೇಟಿಯು ನನ್ನ ಏಳನೆಯ ಭೇಟಿಯಾಗಿದೆ. ಇದು ಬಲವಾದ ಭಾರತ-ಯುಎಇ ಸ್ನೇಹಕ್ಕೆ ನಾವು ನೀಡುವ ಆದ್ಯತೆಯನ್ನು ಸೂಚಿಸುತ್ತದೆ. ನನ್ನ ಸಹೋದರ ಮೊಹಮ್ಮದ್ ಬಿನ್ ಝಾಯೇದ್ ಅವರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ. ಯುಎಇಯಲ್ಲಿ ಮೊದಲ ಹಿಂದೂ ಮಂದಿರವನ್ನು ಉದ್ಘಾಟಿಸುವ ಗೌರವ ನನಗೆ ದೊರೆತಿದೆ. ಅಬುಧಾಬಿಯಲ್ಲಿ ನಡೆಯುವ ಸಮುದಾಯ ಕಾರ್ಯಕ್ರಮದಲ್ಲಿ ನಾನು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಬಳಿಕ ಕತಾರ್ ಭೇಟಿ ನೀಡಲಿದ್ದೇನೆ. ನಾನು ತಮಿಮ್ ಬಿನ್ ಹಮದ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಅವರ ನಾಯಕತ್ವದಲ್ಲಿ ಕತಾರ್ ಅಪಾರ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಈ ಟ್ವೀಟ್‌ಗೆ ರಿಪ್ಲೈ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಅವರು, ಕತಾರ್‌ನ ಶೇಖ್‌ಗಳನ್ನು ಮನವೊಲಿಸಲು ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿಫಲವಾದ ನಂತರ ಮೋದಿ ಅವರು ಸಿನಿಮಾ ತಾರೆ ಶಾರುಕ್ ಖಾನ್ ಅವರಿಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡರು. ಹೀಗಾಗಿ, ನಮ್ಮ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಶೇಖ್‌ಗಳೊಂದಿಗೆ ದುಬಾರಿ ಒಪ್ಪಂದವನ್ನು ಕುದುರಿಸಿಕೊಂಡರು ಎಂದು ಟೀಕಿಸಿದ್ದಾರೆ.
Modi should take Cinema star Sharuk Khan to Qatar with him since after MEA and NSA had failed to persuade the Shiekhs of Qatar, Modi pleaded with Khan to intervene , and thus got an expensive settlement from the Qatar Shiekhs to free our Naval officers.
— Subramanian Swamy (@Swamy39) February 13, 2024
ಮೋದಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಕತಾರ್‌ನಿಂದ ಬಿಡುಗಡೆಗೊಂಡ ನೌಕಾಯೋಧರ ಪ್ರಶಂಸೆ
“ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಕತಾರ್ (Qatar Jail) ಜೈಲಿನಿಂದ ಬಿಡುಗಡೆಯಾಗಿ ದೇಶಕ್ಕೆ ಮರಳಿರುವ ಭಾರತೀಯ ನೌಕಾಯೋಧರು (Indian Navy veterans) ಹೇಳಿದ್ದು, ಪ್ರಧಾನಿಗೆ ಕೃತಜ್ಞತೆ ಹಾಗೂ ಪ್ರಶಂಸೆ ಅರ್ಪಿಸಿದ್ದಾರೆ.
ಬೇಹುಗಾರಿಕೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿ ಒಂದು ವರ್ಷದಿಂದ ಕತಾರ್ ಜೈಲಿನಲ್ಲಿದ್ದ ಎಂಟು ಮಂದಿ ಯೋಧರು ಪ್ರಧಾನಿ ನರೇಂದ್ರ ಮೋದಿ ಅವರ ಸಕಾಲಿಕ ಮಧ್ಯಪ್ರವೇಶ, ಕತಾರ್ ಆಡಳಿತದ ಜೊತೆಗೆ ಪ್ರಧಾನಿ ಹೊಂದಿರುವ ಹಾರ್ದಿಕ ಸಂಬಂಧ ಹಾಗೂ ಭಾರತದ ರಾಜತಾಂತ್ರಿಕ ಜಾಣ್ಮೆಯ ಪರಿಣಾಮ ಬಿಡುಗಡೆಗೊಂಡಿದ್ದಾರೆ. ದೇಶಕ್ಕೆ ಮರಳಿದ ಏಳು ಮಂದಿ ದೆಹಲಿ ವಿಮಾನ ನಿಲ್ದಾಣದಿಂದ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಹೊರನಡೆದರು.
ಕಳೆದ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ COP28 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕತಾರ್‌ನ ಆಡಳಿತಗಾರ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಭೇಟಿಯಾಗಿ ಭಾರತೀಯ ಸಮುದಾಯದ ಯೋಗಕ್ಷೇಮದ ಬಗ್ಗೆ ಚರ್ಚಿಸಿದ್ದರು.
“ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ ಎಂದು ನಮಗೆ ತುಂಬಾ ಸಂತೋಷವಾಗಿದೆ. ಖಂಡಿತವಾಗಿಯೂ, ನಾವು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಏಕೆಂದರೆ ಇದು ಅವರ ವೈಯಕ್ತಿಕ ಹಸ್ತಕ್ಷೇಪದಿಂದ ಮಾತ್ರ ಸಾಧ್ಯವಾಯಿತು” ಎಂದು ಅವರಲ್ಲಿ ಒಬ್ಬರು ಹೇಳಿದರು. “ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲದೆ ನಾವು ಇಲ್ಲಿಗೆ ಮರಳಲು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದ ಇದು ಸಂಭವಿಸಿದೆ” ಎಂದು ಮತ್ತೊಬ್ಬ ಹಿರಿಯ ಯೋಧ ಹೇಳಿದರು.
“ನಾವು ಭಾರತಕ್ಕೆ ಹಿಂತಿರುಗಲು ಸುಮಾರು 18 ತಿಂಗಳುಗಳಿಂದ ಕಾಯುತ್ತಿದ್ದೆವು. ನಾವು ಪ್ರಧಾನಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪ ಮತ್ತು ಕತಾರ್‌ನೊಂದಿಗಿನ ಅವರ ಹಾರ್ದಿಕ ಸಂಬಂಧವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ನಾವು ಭಾರತ ಸರ್ಕಾರಕ್ಕೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರು ಮಾಡಿದ ಪ್ರತಿಯೊಂದು ಪ್ರಯತ್ನಕ್ಕಾಗಿ ನಮ್ಮ ಹೃದಯಪೂರ್ವಕ ಧನ್ಯವಾದಗಳು” ಎಂದು ಅವರು ಹೇಳಿದರು.
ಯೋಧರು ತಮ್ಮ ಮನೆಗೆ ಮರಳಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಕತಾರ್‌ನ ಅಮೀರ್‌ಗೆ ಭಾರತ ಸರ್ಕಾರ ಧನ್ಯವಾದಗಳನ್ನು ಅರ್ಪಿಸಿದ್ದು, ಇಂದು ಬೆಳಿಗ್ಗೆ ಯೋಧರ ಬಿಡುಗಡೆಯ ವಿಚಾರ ಘೋಷಿಸಿತು. “ಕತಾರ್‌ನಲ್ಲಿ ಬಂಧಿತರಾಗಿದ್ದ, ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.