ಮುಂಬಯಿ: ಬಾಲಿವುಡ್ ಗೆ ನನ್ನನ್ನು ಭರಿಸುವ ಶಕ್ತಿ ಇಲ್ಲ, ಕೊಂಡುಕೊಳ್ಳುವ ಸಾಮರ್ಥ್ಯವಿಲ್ಲ ಎಂಬ ತೆಲುಗು ನಟ ಮಹೇಶ್ ಬಾಬು ಅವರ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವ ನಡುವೆಯೇ, 14 ವರ್ಷಗಳ ಹಿಂದೆ ಶಾರುಖ್ ಖಾನ್ ಆಡಿದ್ದ ವಿನಮ್ರ ಮಾತೊಂದು ಸದ್ದು ಮಾಡುತ್ತಿದೆ. ಶಾರುಖ್ ಅಭಿಮಾನಿಗಳೇ ಈ ಹಳೆಯ ವಿಡಿಯೊವನ್ನು ಮತ್ತೆ ಟ್ರೆಂಡಿಂಗ್ ಮಾಡಿದ್ದು, ಇದು ಒಬ್ಬ ಶಕ್ತಿಶಾಲಿ ನಟನ ಹೃದಯದ ಮಾತು ಎಂದು ಬೆನ್ನು ತಟ್ಟಿದ್ದಾರೆ.
14 ವರ್ಷ ಹಿಂದಿನ ಈ ವಿಡಿಯೊದಲ್ಲಿ ಶಾರುಖ್ ಖಾನ್ ಅಂತಾರಾಷ್ಟ್ರೀಯ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ನಿಮಗೆ ಹಾಲಿವುಡ್ ಗೆ ಬರುವ ಪ್ಲ್ಯಾನ್‌ಗಳಿವೆಯೇ ಎಂದು ಕೇಳಿದಾಗ ಶಾರುಖ್ ಖಾನ್, “ನನ್ನ ಇಂಗ್ಲಿಷ್ ಚೆನ್ನಾಗಿಲ್ಲರಿ’ ಅಂತ ಹೇಳಿ ತುಂಬಾ ಜೋರಾಗಿ ನಗುತ್ತಾರೆ.
“ನನಗೆ ಮಾತೇ ಆಡದ ಮೂಕನ ಪಾತ್ರ ಕೊಟ್ಟರೆ ಮಾಡಬಹುದೇನೋ.. ಅದೂ ಗೊತ್ತಿಲ್ಲ. ನಾನೊಬ್ಬ ಯುವಕನ ಹಾಗೆ ನಟಿಸ್ತೇನೆ ಅಷ್ಟೆ. ನಂಗೆ ಆಗಲೇ 42 ವರ್ಷ ಆಗಿದೆ. ನಟನಾಗಿ ನನಗೇನೂ ವಿಶೇಷವಾದ ಪ್ರತಿಭೆ ಏನೂ ಇಲ್ಲ. ನನಗೆ ಕುಂಗ್‌ಫು ಗೊತ್ತಿಲ್ಲ. ಲ್ಯಾಟಿನ್ ಸಾಲ್ಸಾಗೆ ಡ್ಯಾನ್ಸ್ ಮಾಡೋದು ತಿಳಿದಿಲ್ಲ. ನನಗೆ ಒಬ್ಬ ನಟನಿಗೆ ಇರಬೇಕಾದ ಎತ್ತರವೂ ಇಲ್ಲ. ಪಶ್ಚಿಮದ ಚಿತ್ರರಂಗದಲ್ಲಿ ಯಾರೂ ನನ್ನ ವಯಸ್ಸಿನವರು ನಾಯಕರಾಗಿ ಇದ್ದಂತಿಲ್ಲ. ಡ್ರೀಮ್ ಫ್ಯಾಕ್ಟರಿ ಎಂದು ಹೇಳಲಾಗುವ ಈ ಇಂಡಸ್ಟ್ರಿಯಲ್ಲಿ ಅಂಥವರನ್ನು ನಾನು ಇತ್ತೀಚೆಗೆ ನೋಡಿಲ್ಲ. ನನಗೆ ಈ ಇಂಡಸ್ಟ್ರಿಯಲ್ಲಿ ಜಾಗ ಇಲ್ಲ ಅಂತ ನನಗೆ ಅನಿಸುತ್ತದೆ. ಜಾಗ ಯಾಕಿಲ್ಲ ಎಂದರೆ, ನನಗೆ ಅಷ್ಟೊಂದು ಪ್ರತಿಭೆ ಇದೆ ಅಂತಾನೇ ನನಗೆ ಅನಿಸಲ್ಲ,” ಎಂದು ಶಾರುಖ್ ಆ ವಿಡಿಯೊದಲ್ಲಿ ಹೇಳಿದ್ದಾರೆ.
“ಹಾಗಾಗಿ ನಾನು ಭಾರತೀಯ ಚಿತ್ರರಂಗದಲ್ಲೇ ಕೆಲಸ ಮುಂದುವರಿಸಲು ಬಯಸುತ್ತೇನೆ. ಆದರೆ, ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಏರಿಸಬೇಕು ಎನ್ನುವ ಆಸೆ ಇದೆ. ಇದುವೇ ನನ್ನ ಮಹತ್ವಾಕಾಂಕ್ಷೆ” ಎಂದು ಶಾರುಖ್ ಹೇಳಿದ್ದರು.
ಮತ್ತೆ ಎದ್ದು ಬಂದಿರುವ ಈ ವಿಡಿಯೊದಿಂದ ಶಾರುಖ್ ಖಾನ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸ್ವತಃ ಶಾರುಖ್‌ಗೆ ತಾನು ಯಾವುದೇ ಇಂಡಸ್ಟ್ರಿಗೆ ಸೂಟ್ ಆಗಬಲ್ಲ ಪ್ರತಿಭಾವಂತ ಎನ್ನುವುದು ಗೊತ್ತಿದೆ. ಆದರೆ, ಹೇಳಿಕೆಗಳಲ್ಲಿ ವಿನಮ್ರತೆ ಮೆರೆದಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
ಇನ್ನು ಕೆಲವರು, ಎಂಥ ಸುಂದರ ಹುಡುಗ,. ಇಂಥ ನಡೆ ನುಡಿಗಳೇ ಅವರನ್ನು ಮೆಗಾ ಮೆಗಾ ಸೂಪರ್ ಸ್ಟಾರ್ ಮಾಡಿದ್ದು ಎಂದಿದ್ದಾರೆ. ಇನ್ನೊಬ್ಬ ಅಭಿಮಾನಿ ಉತ್ತರ ಇನ್ನೂ ಕುತೂಹಲಕಾರಿಯಾಗಿದೆ. “ಕ್ಲಾಸಿನಲ್ಲಿ ಕೆಲವರು ಮಕ್ಕಳಿರುತ್ತಾರಲ್ಲಾ… ನಾನು ಕಲಿಯೋದ್ರಲ್ಲಿ ಹುಷಾರಿಲ್ಲ, ನನಗೇನೂ ಗೊತ್ತಿಲ್ಲ ಎಂದು ಹೇಳುತ್ತಾ ಇರುತ್ತಾರೆ. ಆದರೆ, ಪರೀಕ್ಷೆಗಳಲ್ಲಿ 95% ಮಾರ್ಕ್ಸ್ ತೆಗೀತಾರೆ” ಅಂತ ಬಣ್ಣಿಸಿದ್ದಾರೆ.
ಶಾರುಖ್ ಕಲಿತಿದ್ದೇನು?
ಹಲವಾರು ಮನಮಿಡಿಯುವ ಸಿನಿಮಾಗಳ ಮೂಲಕ ಅಪ್ಪಟ ಪ್ರೇಮಿಯಾಗಿ ಗುರುತಿಸಿಕೊಂಡು ಬಾಲಿವುಡ್‌ನಲ್ಲಿ ಹೊಸ ಸಂಚಲನ ಉಂಟು ಮಾಡಿದ ಶಾರುಖ್ ಖಾನ್ ಬಹು ಕಾಲ ಸೂಪರ್ ಸ್ಟಾರ್ ಪಟ್ಟದಲ್ಲಿ ವಿರಾಜಮಾನರಾಗಿದ್ದವರು. ದೇಶಾದ್ಯಂತ ಫ್ಯಾನ್ಸ್ ಹೊಂದಿದ್ದಾರೆ. ದಿಲ್ಲಿಯ ಹನ್ಸರಾಜ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದ ಅವರು ಸರ್ಕಸ್ ಧಾರಾವಾಹಿ ಮೂಲಕ ರಂಗ ಪ್ರವೇಶ ಮಾಡಿ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಆದರೂ ಇನ್ನೂ ವಿನಮ್ರತೆಯನ್ನು ಉಳಿಸಿಕೊಂಡಿರುವುದು ವಿಶೇಷ. ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರು ಸದ್ಯ ದೀಪಿಕಾ ಪಡುಕೋಣೆ ಅವರ ಜತೆ ಪಠಾಣ್ ಚಿತ್ರದಲ್ಲಿ ಹಾಗೂ ರಾಜ್‌ಕುಮಾರ್ ಹಿರಾನಿ ಅವರ ಡುಂಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.