ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ (Air India Urination Case) ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕರ್ ಮಿಶ್ರಾ ಈಗ ದೂರುದಾರರ ವಿರುದ್ಧವೇ ಆರೋಪ ಮಾಡಿದ್ದಾರೆ. “ನಾನು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ. ಅವರೇ ಸೀಟಿನ ಮೇಲೆ ಮೂತ್ರ ವಿಸರ್ಜಿಸಿರಬಹುದು” ಎಂದು ಆರೋಪಿ ಪರ ವಕೀಲ ದೆಹಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
“ವೃದ್ಧೆಯ ಸೀಟ್ ಬ್ಲಾಕ್ ಆಗಿತ್ತು. ಹಾಗಾಗಿ, ಶಂಕರ್ ಮಿಶ್ರಾ ಅವರು ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ. ಮಹಿಳೆಯು ಇಂದ್ರೀಯಗಳ ಮೇಲೆ ನಿಗ್ರಹ ಇಲ್ಲದಿರುವ ಕಾಯಿಲೆಯಿಂದ (Incontinence) ಬಳಲುತ್ತಿದ್ದಾರೆ. ಹಾಗಾಗಿ, ಅವರೇ ಮೂತ್ರ ವಿಸರ್ಜನೆ ಮಾಡಿಕೊಂಡಿರಬಹುದು. ಅದರಲ್ಲೂ, ಮಹಿಳೆಯು ಕಥಕ್ ಡಾನ್ಸರ್ ಆಗಿದ್ದು, ಶೇ.80ರಷ್ಟು ಕಥಕ್ ಡಾನ್ಸರ್‌ಗಳು ಇಂತಹ ಸಮಸ್ಯೆಯಿಂದ ಬಳಲುತ್ತಾರೆ” ಎಂದು ಹೇಳಿದ್ದಾರೆ.
ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಕುಡಿತ ಮತ್ತಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪವಿದೆ. ಹಾಗಾಗಿ, ಪೊಲೀಸರು ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
3 ದಿನ ಕಸ್ಟಡಿಗೆ ನೀಡದ ಕೋರ್ಟ್
ಶಂಕರ್ ಮಿಶ್ರಾ ಅವರನ್ನು ಇನ್ನೂ ಮೂರು ದಿನ ಕಸ್ಟಡಿಗೆ ನೀಡಬೇಕು ಎಂದು ದೆಹಲಿ ಪೊಲೀಸರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಹೆಚ್ಚಿನ ವಿಚಾರಣೆಯ ಅವಶ್ಯಕತೆ ಇರುವುದರಿಂದ ಇನ್ನೂ ಮೂರು ದಿನ ಕಸ್ಟಡಿಗೆ ನೀಡಬೇಕು ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದರು.
ಇದನ್ನೂ ಓದಿ | Urination Case | ಹೇವರಿಕೆ ಹುಟ್ಟಿಸುವ ಕೆಲಸವಿದು ಎಂದು ಶಂಕರ್ ಮಿಶ್ರಾಗೆ ಛೀಮಾರಿ ಹಾಕಿದ ನ್ಯಾಯಾಧೀಶೆ; ಜಾಮೀನು ನಿರಾಕರಣೆ